ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳಿಗೆ ವಿಶೇಷ ಸ್ಥಾನಮಾನವಿದೆ. ರಾಜ್ಯಪಾಲರು ಆಯಾಯ ರಾಜ್ಯಗಳ ಪ್ರಥಮ ಪ್ರಜೆಯಾಗಿದ್ದು ಇವರನ್ನು ಕೇಂದ್ರ ಸರಕಾರದ ಶಿಫಾರಸಿನ ಮೇರೆಗೆ ರಾಷ್ಟ್ರಪತಿ ಅವರು ನೇಮಕ ಮಾಡುತ್ತಾರೆ.
ರಾಜ್ಯ ಮತ್ತು ಕೇಂದ್ರ ಸರಕಾರದ ನಡುವಣ ಕೊಂಡಿಯಾಗಿ ರಾಜ್ಯಪಾಲರು ಕರ್ತವ್ಯ ನಿರ್ವಹಿಸುತ್ತಾರೆ. ರಾಜ್ಯದಲ್ಲಿ ಯಾವುದೇ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾದಾಗ ರಾಜ್ಯಪಾಲರ ಪಾತ್ರ ಅತೀ ಮಹತ್ವದ್ದಾಗಿರುತ್ತದೆ.
ರವಿವಾರದಂದು ಕೇಂದ್ರ ಸರಕಾರದ ಶಿಫಾರಸಿನಂತೆ ಹೊಸದಾಗಿ ಆರು ಮಂದಿಯನ್ನು ರಾಷ್ಟ್ರಪತಿ ಅವರು ವಿವಿಧ ರಾಜ್ಯಗಳ ರಾಜ್ಯಪಾಲರನ್ನಾಗಿ ನೇಮಕ ಮಾಡಿದ್ದರೆ ಇನ್ನು ಏಳು ಮಂದಿ ರಾಜ್ಯಪಾಲರನ್ನು ಬೇರೆ ರಾಜ್ಯಗಳಿಗೆ ವರ್ಗಾಯಿಸಿ ಆದೇಶ ಹೊರಡಿಸಿದ್ದಾರೆ.
ಹೊಸದಾಗಿ ರಾಜ್ಯಪಾಲರಾಗಿ ನೇಮಕಗೊಂಡವರು ಮತ್ತು ವರ್ಗಾವಣೆಗೊಂಡ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್ ಅವರ ಹೆಸರುಗಳನ್ನು ಗಮನಿಸಿದಾಗ ಕೇಂದ್ರ ಸರಕಾರ ಚಾಣಾಕ್ಷ ನಡೆ ಇರಿಸಿರುವುದು ಸ್ಪಷ್ಟವಾಗುತ್ತದೆ. ಹೊಸದಾಗಿ ರಾಜ್ಯಪಾಲರಾಗಿ ನೇಮಕಗೊಂಡ ಕೆಲವು ಹೆಸರುಗಳು ಅಚ್ಚರಿ ತರಿಸಿದರೂ ಇದರ ಹಿಂದೆ ಪಕ್ಕಾ ರಾಜಕೀಯ ಲೆಕ್ಕಾಚಾರ, ಚುನಾವಣ ತಂತ್ರಗಾರಿಕೆ, ದೂರದೃಷ್ಟಿ ಇರುವುದು ಗೋಚರವಾಗುತ್ತದೆ.
ರಾಜ್ಯಪಾಲರ ನೇಮಕದ ಸಂದರ್ಭದಲ್ಲಿ ಬಿಜೆಪಿ ಅಳೆದೂ ತೂಗಿ ತನ್ನ ಮನೆಯನ್ನು ಸುವ್ಯವಸ್ಥಿತವಾಗಿ ಇರಿಸಿಕೊಳ್ಳಲು ಆದ್ಯತೆ ನೀಡಿರುವುದು ಸ್ಪಷ್ಟವಾಗುತ್ತದೆ. ವರ್ಷದ ಅಂತ್ಯದಲ್ಲಿ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ಸದ್ಯ ವಿಪಕ್ಷ ನಾಯಕರಾಗಿರುವ ಗುಲಾಬ್‌ಚಂದ್ ಕಟಾರಿಯಾಗೆ ರಾಜ್ಯಪಾಲ ಹುದ್ದೆ ನೀಡಲಾಗಿದೆ. ಇದು ರಾಜ್ಯದಲ್ಲಿ ಬಿಜೆಪಿಯ ಬಣ ರಾಜಕೀಯಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಕೈಗೊಂಡ ಕ್ರಮವೆನ್ನಲಾಗಿದೆ. ಇನ್ನು ಈಗಾಗಲೇ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿ ಚುನಾವಣ ಪ್ರಕ್ರಿಯೆಗಳು ನಡೆಯುತ್ತಿರುವ ರಾಜ್ಯಗಳಾದ ಮೇಘಾಲಯ, ನಾಗಾಲ್ಯಾಂಡ್‌ಗೆ ಅನುಭವಿಗಳನ್ನು ವರ್ಗಾಯಿಸಿ ರಾಜಕೀಯ ಲೆಕ್ಕಾಚಾರದ ಜತೆಯಲ್ಲಿ ಸಂಭಾವ್ಯ ಬೆಳವಣಿಗೆ ಎದುರಿಸಲು ಬಿಜೆಪಿ ಸಜ್ಜಾಗಿರುವಂತೆ ಭಾಸವಾಗುತ್ತಿದೆ.