ಬೆಂಗಳೂರು ನಗರ ಹಾಗೂ ಸುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರನ್ನು ಪೂರೈಸುವ ಯೋಜನೆಯಾದ ಮೇಕೆದಾಟು ಯೋಜನೆ ಈ ಬಾರಿಯ ಚುನಾವಣ ಅಸ್ತ್ರವಾಗುವ ಸಾಧ್ಯತೆಗಳಿವೆ. ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ರಾಜಕೀಯ ಮತ್ತು ಭಾವನಾತ್ಮಕ ಸಂಘರ್ಷಕ್ಕೆ ಕಾರಣವಾಗುವ ಮೇಕೆದಾಟು ಯೋಜನೆ ರಾಜಕೀಯ ಪಕ್ಷಗಳಿಗೆ ಆಯಾ ಸಂದರ್ಭದಲ್ಲಿ ರಾಜಕೀಯ ದಾಳ ಮತ್ತು ಚುನಾವಣ ಅಸ್ತ್ರವೂ ಆಗಿರುತ್ತದೆ.
ಈ ಬಾರಿಯೂ ಅಷ್ಟೇ ದಕ್ಷಿಣ ಕರ್ನಾಟಕದಲ್ಲಿ ಮೇಕೆದಾಟು ಯೋಜನೆಯನ್ನು ಚುನಾವಣೆ ಅಸ್ತ್ರವನ್ನಾಗಿಸಲು ಎಲ್ಲ ಪಕ್ಷಗಳು ಪ್ರಯತ್ನಿಸಿವೆ.
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೂ ಮೇಕೆದಾಟು ಯೋಜನೆ ವಿವಾದ ತಳಕು ಹಾಕಿಕೊಂಡಿರುವುದರಿಂದ ಇದು ಕರ್ನಾಟಕದ ರಾಜಕೀಯ ಪಕ್ಷಗಳಿಗೆ ಕತ್ತಿ ಮೇಲಿನ ನಡಿಗೆ ಆಗಿರುತ್ತದೆ. ತಮಿಳುನಾಡಿನ ವಿಚಾರ ಬಂದಾಗ ಇಲ್ಲಿನ ರಾಜಕೀಯ ಪಕ್ಷಗಳಲ್ಲಿ ಒಗ್ಗಟ್ಟು ಕಾಣುತ್ತದೆ. ಇದೇ ವೇಳೆ ಆಡಳಿತ ಮತ್ತು ವಿಪಕ್ಷಗಳ ವಿಚಾರ ಬಂದಾಗ ಪರಸ್ಪರ ದೂಷಣೆಯ ರಾಜಕೀಯ ಅಸ್ತ್ರಗಳು ಬಳಕೆಯಾಗುತ್ತಿರುತ್ತವೆ.
“ನಾವು ಮೇಕೆದಾಟು ಪರ, ನಮ್ಮ ಸರಕಾರ ಬಂದರೆ ಯೋಜನೆ ಜಾರಿಗೆ ತರುತ್ತೇವೆ’ ಎಂದು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಈ ಮೂರು ಪಕ್ಷಗಳು ಹೇಳುತ್ತವೆ. ಚುನಾವಣೆಗಳ ಸಂದರ್ಭದಲ್ಲಿ ಭರವಸೆಗಳನ್ನೂ ನೀಡುತ್ತಾರೆ. ಪಕ್ಷಗಳ ಚುನಾವಣ ಪ್ರಣಾಳಿಕೆಯಲ್ಲೂ ಈ ವಿಚಾರ ಪ್ರತ್ಯಕ್ಷ-ಪರೋಕ್ಷವಾಗಿ ಪ್ರಸ್ತಾವವೂ ಆಗಿರುತ್ತದೆ. ಅಧಿಕಾರ ಸಿಕ್ಕು ಯೋಜನೆ ಜಾರಿಗೆ ತರುವ ಸಂದರ್ಭ ಬಂದಾಗ ವರಸೆಗಳು ಬದಲಾಗುತ್ತವೆ, ರಾಜಕೀಯ ಇಚ್ಛಾಶಕ್ತಿಯ ಕೊರತೆಯೂ ಕಾಣುತ್ತದೆ. ಒಂದು ರಾಜಕೀಯ ಪಕ್ಷ ಈ ವಿಚಾರ ಎತ್ತಿದಾಗ, ನಾವು ಹಿಂದೆ ಇದನ್ನೇ ಹೇಳಿದ್ದೆವು, ನಮ್ಮ ಉದ್ದೇಶವೂ ಇದೇ ಆಗಿತ್ತು ಎಂದು ಉಳಿದ ರಾಜಕೀಯ ಪಕ್ಷಗಳು ಸಮರ್ಥನೆಗೆ ಇಳಿಯುತ್ತವೆ. ಮುಂದೇನು ಮಾಡಬೇಕು ಎಂಬುದಕ್ಕಿಂತ ಹಿಂದೆ ನಾವೇನು ಮಾಡಿದ್ದೆವು ಅನ್ನುವುದಕ್ಕೆ ಸಮಜಾಯಿಷಿ, ಸಮರ್ಥನೆಗಳಲ್ಲೇ ಹೆಚ್ಚು ಕಾಲ ಕಳೆಯಲಾಗುತ್ತದೆ.