ಬೆಂಗಳೂರು, ಅ.12- ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಾದ ನಂದಿಬೆಟ್ಟ ಹಾಗೂ ಕೆಮ್ಮಣ್ಣುಗುಂಡಿಯನ್ನು ತೋಟಗಾರಿಕೆಯಿಂದ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರ ಮಾಡುವ ಸರ್ಕಾರದ ತೀರ್ಮಾನಕ್ಕೆ ಎರಡು ಇಲಾಖೆಗಳ ನಡುವೆ ಭಾರೀ ಸಂಘರ್ಷ ಏರ್ಪಟ್ಟಿದೆ.
ಯಾವುದೇ ಕಾರಣಕ್ಕೂ ಈ ಎರಡೂ ತಾಣಗಳನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರ ಮಾಡಲು ಅವಕಾಶ ಕೊಡಬಾರದೆಂದು ತೋಟಗಾರಿಕೆ ಇಲಾಖೆಯ ಅಕಾರಿಗಳು ನಾರಾಯಣಗೌಡ ಅವರ ಮೇಲೆ ಒತ್ತಡ ಹಾಕಿದ್ದಾರೆ.
ವಾರ್ಷಿಕವಾಗಿ ಇಲಾಖೆಗೆ ಕೋಟಿಗಳಷ್ಟು ಆದಾಯ ತರುವ ಈ ಪ್ರವಾಸಿತಾಣಗಳನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರ ಮಾಡಿದರೆ, ಮೂಲ ಆದಾಯವೇ ಕೈ ತಪ್ಪಲಿದೆ ಎಂಬ ಆತಂಕವನ್ನು ಅಕಾರಿಗಳು ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಸಚಿವ ನಾರಾಯಣಗೌಡ ಅವರು, ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ನಂದಿಬೆಟ್ಡ ಹಾಗೂ ಕೆಮ್ಮಣ್ಣುಗುಂಡಿ ಪ್ರವಾಸಿ ತಾಣಗಳನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರ ಮಾಡುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈಗಾಗಲೇ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಂದಿಬೆಟ್ಟ ಹಾಗೂ ಕೆಮ್ಮಣ್ಣುಗುಂಡಿ ತಾಣಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹಾಗೂ ದೇಶ- ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಉತ್ತಮ ಸೌಲಭ್ಯ ಒದಗಿಸಲು ವಿವಿಧ ಕಾಮಗಾರಿಗಳನ್ನು ಕೈಗೊಂಡಿತ್ತು.
ಕಳೆದ ವಾರವಷ್ಟೇ ಪ್ರವಾಸೋದ್ಯಮ ಇಲಾಖೆ ಅಕಾರಿಗಳ ಸಭೆ ನಡೆಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಂದಿಬೆಟ್ಟ ಮತ್ತು ಕೆಮ್ಮಣ್ಣುಗುಂಡಿ ತಾಣಗಳನ್ನು ಕೂಡಲೇ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಬೇಕು. ಈ ಪ್ರಕ್ರಿಯೆ ಒಂದು ತಿಂಗಳೊಳಗೆ ಮುಗಿಯಬೇಕೆಂದು ಸೂಚನೆ ಕೊಟ್ಟಿದ್ದರು.
ಇದು ವಿವಾದಕ್ಕೆ ಕಾರಣವಾಗಿದ್ದು , ಎರಡು ತಾಣಗಳನ್ನು ನಾವೇ ಅಭಿವೃದ್ಧಿಪಡಿಸುತ್ತೇವೆ. ಪ್ರವಾಸೋದ್ಯಮ ಇಲಾಖೆಗೆ ನಾವು ಹಸ್ತಾಂತರ ಮಾಡುವುದಿಲ್ಲ ಎಂದು ಸಚಿವ ನಾರಾಯಣಗೌಡ ಆಗೂ ಅಕಾರಿಗಳು ಪಟ್ಟು ಹಿಡಿದಿದ್ದರು.
ಎರಡೂ ಸ್ಥಳಗಳನ್ನು ಬಿಟ್ಟು ಕೊಟ್ಟರೆ ತೋಟಗಾರಿಕೆ ಇಲಾಖೆಗೆ ಮೂಲ ಆದಾಯಕ್ಕೆ ಖೋತಾ ಬೀಳಲಿದೆ. ಹೀಗಾಗಿ ಈ ಪ್ರಕ್ರಿಯೆಯನ್ನು ಸದ್ಯಕ್ಕೆ ತಡೆ ಹಿಡಿಯುವಂತೆ ಕೋರಿದ್ದಾರೆ ಎಂದು ತಿಳಿದು ಬಂದಿದೆ.ನಂದಿಬೆಟ್ಟ ಮತ್ತು ಕೆಮ್ಮಣ್ಣು ಗುಂಡಿಗೆ ವರ್ಷ ಪೂರ್ತಿ ದೇಶ-ವಿದೇಶಗಳಿಂದ ಲಕ್ಷಾಂತರ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಾರೆ.
ಇದರಿಂದ ಬರುವ ಪ್ರವಾಸಿಗರಿಗಾಗಿ ತೋಟಗಾರಿಕೆ ಇಲಾಖೆ ಪ್ರವೇಶ ಶುಲ್ಕವನ್ನು ನಿಗದಿಪಡಿಸಿದೆ. ಇದರ ಆದಾಯವೇ ಕೋಟಿಗಟ್ಟಲೆಯಾಗಿರುವುದರಿಂದ ಎರಡು ತಾಣಗಳನ್ನು ಬಿಟ್ಟು ಕೊಡಲು ಇಲಾಖೆ ಸಿದ್ಧವಿಲ್ಲ.
ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಹಸ್ತಾಂತರ ಪ್ರಕ್ರಿಯೆಯನ್ನು ತಡೆ ಹಿಡಿಯುವಂತೆ ನಾರಾಯಣಗೌಡ ಮಾಡಿರುವ ಮನವಿಯನ್ನು ಸಿಎಂ ಪುರಸ್ಕರಿಸಲಿದ್ದಾರೆಯೇ ಇಲ್ಲವೇ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರ ಮಾಡುವರೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.