Breaking News

ರಾಜ್ಯದ ರೈಲು ಯೋಜನೆಗೆ ದಾಖಲೆ ಅನುದಾನ ಹಂಚಿಕೆ

Spread the love

ಹುಬ್ಬಳ್ಳಿ: ಕೇಂದ್ರ ಬಜೆಟ್​ನಲ್ಲಿ ಈ ಬಾರಿ ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಅಂದಾಜು 7,561 ಕೋಟಿ ರೂ. ದಾಖಲೆ ಪ್ರಮಾಣದ ಅನುದಾನ ನೀಡಲಾಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

2014ರಲ್ಲಿನ 835 ಕೋಟಿ ರೂ.ಗೆ ಹೋಲಿಸಿದರೆ 9 ಪಟ್ಟು ಹೆಚ್ಚಾಗಿದೆ. ರಾಜ್ಯದಲ್ಲಿ ಅಂದಾಜು 49,536 ಕೋಟಿ ರೂ. ಮೊತ್ತದ ಯೋಜನೆಗಳು ಪ್ರಗತಿಯಲ್ಲಿವೆ ಎಂದು ವಿಡಿಯೋ ಕಾನ್ಪರೆನ್ಸ್ ಮೂಲಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಬೆಂಗಳೂರಿನ ವಿಶ್ವೇಶ್ವರಯ್ಯ ರೈಲು ನಿಲ್ದಾಣದ ವಿನ್ಯಾಸ ಅತ್ಯಂತ ಶ್ರೇಷ್ಠ ದರ್ಜೆಯದಾಗಿದ್ದು, ಮಾದರಿ ನಿಲ್ದಾಣವಾಗಲಿದೆ. ಅಮೃತ ಭಾರತ ಯೋಜನೆಯಡಿ ರಾಜ್ಯದ 55 ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ರೈಲ್ವೆ ಕಾಮಗಾರಿಗಳು ವೇಗವಾಗಿ ಸಾಗಿದ್ದು, ರಾಜ್ಯ ಸರ್ಕಾರ ಕೂಡ ಭೂಸ್ವಾಧೀನ, ಅನುಮತಿ ಸೇರಿ ಎಲ್ಲ ರೀತಿಯ ಸಹಕಾರ ನೀಡುತ್ತಿದೆ ಎಂದರು.

ರೈಲುಗಳಲ್ಲಿ ಇನ್ನು ಮುಂದೆ ದಕ್ಷಿಣ ಭಾರತದ ಊಟ, ಉಪಾಹಾರ ಲಭ್ಯವಾಗಲಿದೆ. ವಂದೇ ಭಾರತ ರೀತಿಯಲ್ಲಿ ವಂದೇ ಮೆಟ್ರೋ ರೈಲುಗಳು ಆರಂಭವಾಗಲಿವೆ ಎಂದು ತಿಳಿಸಿದರು. ಹಸಿರು ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಡಿಸೆಂಬರ್ ವೇಳೆಗೆ ಹೈಡ್ರೋಜನ್ ರೈಲು ಭಾರತದಲ್ಲಿ ನಿರ್ವಣವಾಗಲಿದೆ. ಈ ವರ್ಷ 250, ಮುಂದಿನ ವರ್ಷ 300 ಹಳೆಯ ಬೋಗಿಗಳನ್ನು ಬದಲಾಯಿಸಲಿದ್ದೇವೆ ಎಂದು ವೈಷ್ಣವ್ ತಿಳಿಸಿದರು.

ನಂಬರ್ ಒನ್ ಸ್ಥಾನ: ರೈಲು ಮಾರ್ಗ ಡಬ್ಲಿಂಗ್, ವಿದ್ಯುದೀಕರಣ, ಕಾರ್ಯಾಚರಣೆ, ಹೊಸ ಮಾರ್ಗ ನಿರ್ವಣ, ಮೂಲಸೌಕರ್ಯ ಚಟುವಟಿಕೆಗಳ ಮುಖ್ಯ ನಿರ್ವಹಣಾ ಸೂಚ್ಯಂಕ- ಕೆಪಿಐನಲ್ಲಿ ನೈಋತ್ಯ ರೈಲ್ವೆ ವಲಯ ನಂಬರ್ ಒನ್ ಸ್ಥಾನದಲ್ಲಿದೆ ಎಂದು ನೈಋತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ್ ಹೇಳಿದರು. ಹುಬ್ಬಳ್ಳಿ-ಬೆಂಗಳೂರು ಡಬ್ಲಿಂಗ್ ಹಾಗೂ ವಿದ್ಯುದೀಕರಣ ಮಾ.31ಕ್ಕೆ ಪೂರ್ಣಗೊಳ್ಳಲಿದೆ. ನಂತರದಲ್ಲಿ ವಂದೇ ಭಾರತ ರೈಲು ಸಂಚರಿಸಲಿದೆ. 50 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಪಟ್ಟಣಗಳಿಗೆ ರೈಲು ಸಂಪರ್ಕ, ಹುಬ್ಬಳ್ಳಿ, ವಾಸ್ಕೋ, ಮೈಸೂರು ನಿಲ್ದಾಣಗಳಲ್ಲಿ ವಿಶ್ವದರ್ಜೆಯ ಸೌಲಭ್ಯ, ಹೊಸ ಮಾರ್ಗ ನಿರ್ವಣ, ಡಬ್ಲಿಂಗ್, ವಿದ್ಯುದೀಕರಣ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲಾಗುವುದು. ಹುಬ್ಬಳ್ಳಿ- ಅಂಕೋಲಾ ಮಾರ್ಗ ನಿರ್ವಣಕ್ಕಿರುವ ಸಮಸ್ಯೆಗಳು ಪರಿಹಾರವಾಗುವ ನಿರೀಕ್ಷೆಯಲ್ಲಿದ್ದೇವೆ ಎಂದರು.

ಮೈಸೂರು ವಿಭಾಗಕ್ಕೆ 920 ಕೋಟಿ ರೂ.: ನೈಋತ್ಯ ರೈಲ್ವೆ ಮೈಸೂರು ವಿಭಾಗದ 15 ರೈಲ್ವೆ ನಿಲ್ದಾಣಗಳನ್ನು ತಲಾ 8 ರಿಂದ 10 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಅನುದಾನ ನೀಡಲಾಗಿದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ. ಚಾಮರಾಜನಗರ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ತಿಪಟೂರು, ಅರಸೀಕೆರೆ, ತಾಳಗುಪ್ಪ, ಹರಿಹರ, ರಾಣಿಬೆನ್ನೂರು, ಚಿತ್ರದುರ್ಗ, ಬಂಟ್ವಾಳ, ಹಾಸನ, ಸಾಗರ ಜಂಬೂಗಾರು, ಶಿವಮೊಗ್ಗ ಪಟ್ಟಣ, ಚಿಕ್ಕಮಗಳೂರು ಮತ್ತು ದಾವಣಗೆರೆ ನಿಲ್ದಾಣಗಳನ್ನು ‘ಅಮೃತ ಭಾರತ ನಿಲ್ದಾಣ’ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.

ಗುಲ್ಬರ್ಗ ರೈಲ್ವೆ ವಿಭಾಗಕ್ಕೆ ಸಾವಿರ ರೂ.!: ಗುಲ್ಬರ್ಗ ರೈಲ್ವೆ ವಿಭಾಗದ ಆಡಳಿತ ಕಚೇರಿ ನಿರ್ಮಾಣ ಮತ್ತು ಮೂಲಸೌಕರ್ಯ ಕಲ್ಪಿಸಲು ಕೇಂದ್ರ ಸರ್ಕಾರದ ಪ್ರಸಕ್ತ ಬಜೆಟ್​ನಲ್ಲಿ ಸಾವಿರ ರೂ. ಹಂಚಿಕೆ ಮಾಡಲಾಗಿದೆ! ಬಜೆಟ್​ನಲ್ಲಿ ರೈಲ್ವೆ ಇಲಾಖೆಗೆ ಹಂಚಿಕೆ ಮಾಡಿರುವ ಅನುದಾನ ಆಧರಿಸಿ ಹೊರಡಿಸಲಾಗಿರುವ ಪಿಂಕ್ ಬುಕ್​ನಲ್ಲಿ ಈ ಅಂಶ ಉಲ್ಲೇಖವಾಗಿದೆ. ಎರಡು ವರ್ಷದ ಹಿಂದೆ ಕೇವಲ ಒಂದು ರೂ. ನೀಡಲಾಗಿತ್ತು. ಈ ಸಲ ಸಾವಿರ ರೂ. ನೀಡುವ ಮೂಲಕ ಕಲ್ಯಾಣ ಕರ್ನಾಟಕ ಜನ ಹುಬ್ಬೇರಿಸುವಂತೆ ಮಾಡಲಾಗಿದೆ.

ಯಾವ ಮಾರ್ಗಕ್ಕೆ ಎಷ್ಟು ಅನುದಾನ?: ತುಮಕೂರು-ಚಿತ್ರದುರ್ಗ-ದಾವಣಗೆರೆ ಹೊಸ ಮಾರ್ಗಕ್ಕೆ 420 ಕೋಟಿ ರೂ., ತುಮಕೂರು-ರಾಯದುರ್ಗ ಹೊಸ ಮಾರ್ಗಕ್ಕೆ 350 ಕೋಟಿ, ಶಿವಮೊಗ್ಗ-ಶಿಕಾರಿಪುರ- ರಾಣೆಬೆನ್ನೂರು ಹೊಸ ಮಾರ್ಗಕ್ಕೆ 150 ಕೋಟಿ, ಕಡೂರು-ಚಿಕ್ಕಮಗಳೂರು -ಸಕಲೇಶಪುರ ಹೊಸ ಮಾರ್ಗಕ್ಕೆ 145 ಕೋಟಿ, ಹಾಸನ-ಬೇಲೂರು ಹೊಸ ಮಾರ್ಗಕ್ಕೆ 60 ಕೋಟಿ ರೂ. ಅನುದಾನ ಘೊಷಿಸಲಾಗಿದೆ.

ಡಬ್ಲಿಂಗ್ ಕಾಮಗಾರಿಗಳು: ಹುಬ್ಬಳ್ಳಿ- ಚಿಕ್ಕಜಾಜೂರು ಡಬ್ಲಿಂಗ್​ಗೆ 150 ಕೋಟಿ ರೂ. ಹೊಸದುರ್ಗ- ಚಿಕ್ಕಜಾಜೂರು ಡಬ್ಲಿಂಗ್​ಗೆ 3 ಕೋಟಿ, ಅರಸಿಕೆರೆ- ತುಮಕೂರು ಡಬ್ಲಿಂಗ್​ಗೆ 75 ಕೋಟಿ ರೂ ಒದಗಿಸಲಾಗಿದೆ. ಟ್ರಾಫಿಕ್ ಫೆಸಿಲಿಟಿಗೆ 71 ಕೋಟಿ ರೂ., ರಸ್ತೆ ಸುರಕ್ಷತಾ ಕಾಮಗಾರಿಗಳಿಗೆ 12.2 ಕೋಟಿ, ಹಳಿ ನವೀಕರಣ ಕಾಮಗಾರಿಗೆ 132.4 ಕೋಟಿ, ಸೇತುವೆ ಕಾಮಗಾರಿಗೆ 7 ಕೋಟಿ, ಗ್ರಾಹಕ ಸೌಕರ್ಯಗಳಿಗೆ 177.4 ಕೋಟಿ, ಸಿಗ್ನಲ್ ಮತ್ತು ಟೆಲಿಕಮ್ಯುನಿಕೇಷನ್ ಅಭಿವೃದ್ಧಿಗೆ 25 ಕೋಟಿ, ಇತರ ಕಾಮಗಾರಿಗಳಿಗೆ 16.7 ಕೋಟಿ, ಮೇಲ್ಸೇತುವೆ ಹಾಗೂ ಕೆಳಸೇತುವೆ ನಿರ್ವಣಕ್ಕೆ 66.3 ಕೋಟಿ, ಸಿಬ್ಬಂದಿ ಕಲ್ಯಾಣಕ್ಕೆ 4 ಕೋಟಿ ರೂ. ಮೀಸಲಾಗಿದೆ ಎಂದು ಹೇಳಿದರು.


Spread the love

About Laxminews 24x7

Check Also

ಹುಬ್ಬಳ್ಳಿ ಬಾಲಕಿ ಕೊಲೆ ಪ್ರಕರಣ : ಎನ್​ಕೌಂಟರ್ ಲೇಡಿ ಸಿಂಗಂ ಹಾಡಿ – ಹೊಗಳುತ್ತಿರುವ ಸಾರ್ವಜನಿಕರು

Spread the love ಹುಬ್ಬಳ್ಳಿ : ಇಲ್ಲಿನ ಅಶೋಕನಗರದಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಯತ್ನ ಮಾಡಿ ಬಳಿಕ ಕೊಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ