ಬಳ್ಳಾರಿ: ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದ ಸರ್ಕಾರದ ಶೇ. 40 ಕಮಿಷನ್ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಇನ್ನಷ್ಟು ಅಕ್ರಮ ಹೊರಬಿದ್ದಿದೆ. ಈ ಹಿಂದೆ ಗುತ್ತಿಗೆದಾರರ ವಿಷಯದಲ್ಲಿ ಕಮಿಷನ್ ವಿರುದ್ಧ ಕೂಗೆದ್ದಿತ್ತು, ಈಗ ಕಲಾವಿದರೂ ಕಮಿಷನ್ ವಿರುದ್ಧ ದನಿ ಎತ್ತಿದ್ದಾರೆ.
ಪರಿಣಾಮವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಯೊಬ್ಬರು ಅಮಾನತುಗೊಂಡಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಯಾಗಿರುವ ಸಿದ್ದಲಿಂಗೇಶ್ವರ್ ರಂಗಣ್ಣನವರ್ ಅಮಾನತು ಆದವರು. ಇವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಕಮಿಷನ್ಗಾಗಿ ಕಲಾವಿದರಲ್ಲಿ ಬೇಡಿಕೆ ಇಟ್ಟ ಕುರಿತ ಆಡಿಯೋ ಕ್ಲಿಪ್ ಬಹಿರಂಗಗೊಂಡು ವೈರಲ್ ಆದ ಹಿನ್ನೆಲೆಯಲ್ಲಿ ಅಧಿಕಾರಿ ಅಮಾನತುಗೊಂಡಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಕ್ಕೆ ಕಲಾವಿದರಿಂದ ಕಮಿಷನ್ಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಕಾರ್ಯಕ್ರಮವೊಂದಕ್ಕೆ ಹತ್ತು ಸಾವಿರ ರೂ. ಕೊಟ್ಟರೆ ಹೆಚ್ಚು ಹೆಚ್ಚು ಕಾರ್ಯಕ್ರಮ ಕೊಡುವ ವಿಚಾರವೂ ಬೆಳಕಿಗೆ ಬಂದಿದೆ. ಮಾತ್ರವಲ್ಲ, ಕೆಲವೊಮ್ಮೆ ಕಾರ್ಯಕ್ರಮ ಮಾಡದಿದ್ದರೂ ಹಣ ಖಾತೆಗೆ ಹಾಕಿ, ಬಳಿಕ ಫಲಾನುಭವಿಗಳಿಂದ ನಗದು ರೂಪದಲ್ಲಿ ಕಮಿಷನ್ ಪಡೆಯುತ್ತಿದ್ದರು ಎಂಬ ಆರೋಪವೂ ಕೇಳಿಬಂದಿದೆ.
ತಮ್ಮ ಕಮಿಷನ್ ಧಂದೆಗಾಗಿ ಸಿದ್ದಲಿಂಗೇಶ್ ಇಲಾಖೆಯ ಡಿ ಗ್ರೂಪ್ನ ಮಹಿಳಾ ಸಿಬ್ಬಂದಿಯ ಮೊಬೈಲ್ಫೋನ್ಗಳನ್ನು ಬಳಸುತ್ತಿದ್ದರು ಎನ್ನಲಾಗಿದೆ. ಜಂಟಿ ನಿರ್ದೇಶಕರಿಗೆ ಕೊಡಬೇಕು ಎಂದು ಕಮಿಷನ್ ವಸೂಲಿ ಮಾಡಲಾಗುತ್ತಿದ್ದು, ನಗದು ರೂಪದಲ್ಲೇ ಕಮಿಷನ್ ಕೊಡಬೇಕು ಎಂದು ಕೂಡ ತಾಕೀತು ಮಾಡುತ್ತಿರುವುದು ಆಡಿಯೋದಲ್ಲಿದೆ. ಈ ಆಡಿಯೋ ಕ್ಲಿಪ್ ವೈರಲ್ ಆಗಿದ್ದಲ್ಲದೆ, ಕಲಾವಿದರೂ ಜಿಲ್ಲಾಡಳಿತಕ್ಕೆ ದೂರು ನೀಡಿದ್ದರಿಂದ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.