ಬೆಳಗಾವಿ: ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿ ನವರಾತ್ರಿ ಹಾಗೂ ಇತರೆ ಉತ್ಸವಗಳನ್ನು ಸರಳ ಮತ್ತು ಸಾಂಕೇತಿಕವಾಗಿ ಆಚರಿಸುವಂತೆ ಜಿಲ್ಲಾ ಧಾರ್ಮಿಕ ಪರಿಷತ್ತಿನ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ಧಾರ್ಮಿಕ ಪರಿಷತ್ತಿನ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನಲಾಕ್-5.0 ರ ಮಾರ್ಗಸೂಚಿಗಳು ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಸುತ್ತೋಲೆಯಲ್ಲಿ ತಿಳಿಸಿರುವಂತೆ ಸರಳ ಮತ್ತು ಸಾಂಕೇತಿಕವಾಗಿ ನವರಾತ್ರಿ ಆಚರಿಸಲು ದೇವಸ್ಥಾನ ಆಡಳಿತ ಮಂಡಳಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಕೋವಿಡ್-19 ಸೋಂಕು ಹರಡದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಜನರು ಮಾತ್ರ ದೇವಸ್ಥಾನದ ಆವರಣದಲ್ಲಿ ಉತ್ಸವ ಆಚರಿಸಬೇಕು ಎಂದರು.
ಖಾಸಗಿ ಸಂಸ್ಥೆಯ ಮೂಲಕ ಜಿಲ್ಲೆಯಲ್ಲಿ ಇರುವ ಅಧಿಸೂಚಿತ ದೇವಸ್ಥಾನಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಸಮಗ್ರ ವರದಿಯೊಂದನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಹಿರೇಮಠ ನಿರ್ದೇಶನ ನೀಡಿದರು.
ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಿಲ್ಲಾ ಧಾರ್ಮಿಕ ಪರಿಷತ್ತಿನ ಪದನಿಮಿತ್ತ ಕಾರ್ಯದರ್ಶಿಯೂ ಆಗಿರುವ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಾದ ರವಿ ಕೊಟಾರಗಸ್ತಿ, ನ್ಯಾಯಿಕ ಸದಸ್ಯರಾದ ಯೋಗೇಶ್ ಕರಗುದ್ರಿ, ಧಾರ್ಮಿಕ ದತ್ತಿ ತಹಶೀಲ್ದಾರ ಡಿ.ಎನ್.ಜಾಧವ, ಪರಿಷತ್ತಿನ ನೂತನ ಸದಸ್ಯರಾದ ಶೀತಿಕಂಠ ಶ್ರೀಪಾದ ಜೋಶಿ, ವಿಠ್ಠಲ ಭರ್ಮಾ ಹುಬ್ಬಳ್ಳಿ, ಜಯಶ್ರೀ ಜಾಧವ, ಚಿಂತಾಮಣಿ ಗ್ರಾಮೋಪಾಧ್ಯೆ, ವಿಠ್ಠಲ ಮಾಳಿ, ವಿನೋದ ದೊಡ್ಡಣ್ಣವರ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.