Breaking News

ಬೆಳಗಾವಿ: ಬಾನಂಗಳದಲ್ಲಿ ಗಾಳಿಪಟ ಚಿತ್ತಾರ

Spread the love

ಬೆಳಗಾವಿ: ಇಲ್ಲಿನ ಬಿ.ಎಸ್‌. ಯಡಿಯೂರಪ್ಪ ಮಾರ್ಗದ ಮಾಲಿನಿ ಸಿಟಿಯಲ್ಲಿ ಶನಿವಾರ ಆರಂಭಗೊಂಡ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಹಾರಾಡಿದ ಬಗೆಬಗೆಯ ವಿನ್ಯಾಸಗಳ ಗಾಳಿಪಟಗಳು ಬಾನಂಗಳದಲ್ಲಿ ಚಿತ್ತಾರ ಮೂಡಿಸಿದವು. ಕಾಂತಾರ, ಇಂಡಿಯನ್‌ ಲಿಫ್ಟರ್‌, ಕವ್‌, ಮಾಂತಾ ರೇ, ರಿಂಗ್‌ ಮಾದರಿಯ ಪತಂಗ ಕಣ್ಮನಸೆಳೆದವು.

ಗಾಳಿಪಟಗಳ ಹಾರಾಟ ನೋಡಿ ಬಾನಲ್ಲಿ ಜನರ ಮನ ತೇಲಿತು.

ಪ್ರತಿವರ್ಷ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಲಾಗುತ್ತಿತ್ತು. ಕೊರೊನಾ ಆತಂಕದಿಂದಾಗಿ ಕಳೆದ ಎರಡು ವರ್ಷ ರದ್ದಾಗಿತ್ತು. ಈ ಬಾರಿ ಸೋಂಕಿನ ಹಾವಳಿ ತಗ್ಗಿದ್ದರಿಂದ 11ನೇ ಆವೃತ್ತಿಯ ಗಾಳಿಪಟ ಉತ್ಸವ ನಡೆಯುತ್ತಿದ್ದು, ದೇಶ-ವಿದೇಶದ ವಿವಿಧ ಗಾಳಿಪಟ ಉತ್ಸವಗಳಲ್ಲಿ ಛಾಪು ಮೂಡಿಸಿದ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಗಾಳಿಪಟ ಹಾರಿಸುವ ಆಟಗಾರರು ಭಾಗವಹಿಸಿದ್ದಾರೆ.

20 ವರ್ಷಗಳಿಂದ ಭಾಗವಹಿಸುತ್ತಿದ್ದೇವೆ: ‘ಗಾಳಿಪಟ ಹಾರಿಸುವುದೆಂದರೆ ನಮಗೆ ಎಲ್ಲಿಲ್ಲದ ಖುಷಿ. ಏಷ್ಯಾ ಖಂಡದ
ವಿವಿಧ ರಾಷ್ಟ್ರಗಳಲ್ಲಿ ನಡೆದ ಉತ್ಸವಗಳಲ್ಲಿ 20 ವರ್ಷಗಳಿಂದ ಭಾಗವಹಿಸುತ್ತಿದ್ದೇವೆ. ವಿಭಿನ್ನ ಸಂಸ್ಕೃತಿ ಮತ್ತು ಜನರು ತೋರುವ ಪ್ರೀತಿ ಇಷ್ಟವಾಗುತ್ತದೆ’ ಎಂದು
ಸ್ವಿಡ್ಜರ್‌ಲೆಂಡ್‌ನ ಮಾರ್ಸೆಲ್‌ ಬುರ್ರಿ ಮತ್ತು ಜಿನ್ನಿನೆ ಬುರ್ರಿ ದಂಪತಿ ‘ಪ್ರಜಾವಾಣಿ’ ಎದುರು ಸಂತಸ ಹಂಚಿಕೊಂಡರು.

‘2008ರಿಂದ ಭಾರತ ಮಾತ್ರವಲ್ಲದೆ; ಇಂಡೋನೆಷ್ಯಾ, ಇಂಗ್ಲೆಂಡ್‌, ಅಮೆರಿಕದಲ್ಲಿ ನಡೆದ ಗಾಳಿಪಟ ಉತ್ಸವಕ್ಕೆ ಹೋಗಿದ್ದೇನೆ. ಭಾರತದ ಸ್ಮಾರಕಗಳು, ಧಾರ್ಮಿಕ ಆಚರಣೆಗಳು ಮತ್ತು ಹಬ್ಬ-ಹರಿದಿನಗಳ ಬಗ್ಗೆ ಮಾಹಿತಿ ನೀಡುವ ‘ರೊಕಾಕ್ಕೊ’
ಗಾಳಿಪಟವನ್ನು ಇಲ್ಲಿ
ಹಾರಿಸುತ್ತಿದ್ದೇನೆ’ ಎಂದು ಗುಜರಾತಿನ ಅಹಮದಾಬಾದ್‌ನ ಭಾವನಾ ಮೆಹ್ತಾ ಹೇಳಿದರು.

34 ರಾಷ್ಟ್ರಗಳಲ್ಲಿ ನಡೆದ ಗಾಳಿಪಟ ಉತ್ಸವಗಳಲ್ಲಿ ಭಾಗವಹಿಸಿದ ಅನುಭವ ಹೊಂದಿರುವ ಸೂರತ್‌ನ ನಿತೇಶ ಲಾಕುಮ್‌, ಇಂಡಿಯನ್‌ ಲಿಫ್ಟರ್‌ ಕೈಟ್‌ ಹಾರಿಸಿ ಗಮನ ಸೆಳೆದರು.
‘ನನ್ನ ಬಳಿ ವೈವಿಧ್ಯಮಯ ವಿನ್ಯಾಸಗಳ ಜತೆಗೆ, ರಿಮೋಟ್‌ ಕಂಟ್ರೋಲ್‌ ಕೈಟ್‌ಗಳೂ ಇವೆ’ ಎನ್ನುತ್ತಾರೆ ಅವರು.

ದೊಡ್ಡಬಳ್ಳಾಪುರದಿಂದ ಬಂದಿದ್ದ ಎಸ್‌.ಮುನಿರಾಜು, ಕೆ.ಎಸ್‌.ಪ್ರಸನ್ನ, ಮಹೇಶ, ಕಿಶೋರಿ ಹಾರಿಸಿದ ರಿಂಗ್‌ ಕೈಟ್‌ ಜನರನ್ನು ತನ್ನತ್ತ ಸೆಳೆಯಿತು. ಪತಂಗ ಹಾರಿಸಲು ಬೆಳಗಾವಿಗೆ 8ನೇ ಬಾರಿ ಬಂದಿರುವ ಇಂಗ್ಲೆಂಡ್‌ನ ಬಾಬ್‌ ಸಿ., ಕೃಷ್ಣ ನೃತ್ಯ ಮಾಡುವ ಗಾಳಿಪಟ ಹಾರಿಸಿದರು.


Spread the love

About Laxminews 24x7

Check Also

ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ

Spread the love ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ