ರಾಮದುರ್ಗ: ಶಿಕ್ಷಕರು ಮನಸ್ಸು ಮಾಡಿದರೆ ಸಮುದಾಯದ ಸಹಭಾಗಿತ್ವದೊಂದಿಗೆ ಸರ್ಕಾರಿ ಶಾಲೆಯನ್ನೂ ಮಾದರಿಯಾಗಿ ಅಭಿವೃದ್ಧಿಪಡಿಸಬಹುದು. ಇದಕ್ಕೆ ಉತ್ತಮ ಉದಾಹರಣೆ, ತಾಲ್ಲೂಕಿನ ಕುನ್ನಾಳ ಪ್ರಾಥಮಿಕ ಶಾಲೆ.
1926ರಲ್ಲಿ ಈ ಶಾಲೆ ಸ್ಥಾಪನೆಯಾಗಿದೆ.
ಇಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಹಳೆಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪಾಲಕರು ಹಾಗೂ ಗ್ರಾಮಸ್ಥರಿಂದ ದೇಣಿಗೆ ಸಂಗ್ರಹಿಸಿ, ಶಾಲೆಗೆ ಹೈಟೆಕ್ ಸ್ಪರ್ಶ ಕೊಟ್ಟಿದ್ದಾರೆ. 1ರಿಂದ 8ನೇ ತರಗತಿಯಲ್ಲಿ 253 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಕಂಪ್ಯೂಟರ್ ಲ್ಯಾಬ್: ಈ ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ತಲೆ ಎತ್ತಿದ್ದು, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುತ್ತಿದ್ದಾರೆ. ಲ್ಯಾಬ್ ನಿರ್ಮಾಣಕ್ಕೆ ಮುತ್ತಪ್ಪ ಮಳಲಿ, ಸಂತೋಷ ತಿಪ್ಪಿ, ಈರಣ್ಣ ಕೌಜಲಗಿ, ರಮೇಶ ಮಳಲಿ, ಲಕ್ಷ್ಮಣ ಜೀರಗಾಳ ಸೇರಿ ಹಲವರು ಕೈಜೋಡಿಸಿದ್ದಾರೆ.
ಎಸ್‌ಡಿಎಂಸಿ ಅಧ್ಯಕ್ಷ ಶ್ರೀಕಾಂತ ಮಕ್ಕಳಗೇರಿ, ಉಪಾಧ್ಯಕ್ಷ ಹಣಮಂತ ಗಾಣಿಗೇರ ಪ್ರಿಂಟರ್, ಝೆರಾಕ್ಸ್ ಯಂತ್ರ, ಸುನೀಲ ಮಳಲಿ ಎಂಬುವವರು ಲ್ಯಾಪ್‌ಟಾಪ್ ಅನ್ನು ದೇಣಿಗೆಯಾಗಿ ನೀಡಿದ್ದಾರೆ. ಸಂತೋಷ ಜಕಾತಿ ಕಂಪ್ಯೂಟರ್ ಲ್ಯಾಬ್‌ಗೆ ಯುಪಿಎಸ್ ವ್ಯವಸ್ಥೆ ಮಾಡಿದ್ದಾರೆ.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಾಂತಾ ಸುಣಧೋಳಿ ₹1.30 ಲಕ್ಷ, ನಿವೃತ್ತ ತಹಶೀಲ್ದಾರ್ ಎಂ.ಬಿ.ನಾಡಗೌಡ್ರ ₹50 ಸಾವಿರ ಹಾಗೂ ಇತರ ದಾನಿಗಳು ನೀಡಿದ ತಲಾ ₹20 ಸಾವಿರ ದೇಣಿಗೆಯಿಂದ ಪ್ರಯೋಗಾಲಯ ನಿರ್ಮಿಸಲಾಗಿದೆ.
ಡಾ.ಶಶಿಕಾಂತ ಕುಲಗೋಡ ನೇತೃತ್ವದ ರಾಜಲಕ್ಷ್ಮಿ ಚಿಲ್ಡ್ರನ್ ಫೌಂಡೇಷನ್ ವತಿಯಿಂದ ಸ್ಮಾರ್ಟ್‌ಬೋರ್ಡ್ ಒಳಗೊಂಡ ಸ್ಮಾರ್ಟ್ ತರಗತಿ, ಇಂಗ್ಲಿಷ್ ಭಾಷಾ ಪ್ರಯೋಗಾಲಯ ನಿರ್ಮಿಸಲಾಗಿದೆ. ನರೇಗಾ ಯೋಜನೆಯಡಿ ಅಡುಗೆ ಕೋಣೆ, ಕಾಂಪೌಂಡ್, ಶೌಚಗೃಹಗಳ ನಿರ್ಮಾಣ ಹಾಗೂ ಮೈದಾನ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ.
*
ಸುಸಜ್ಜಿತ ಗ್ರಂಥಾಲಯ
ವರಗನವರ ಕುಟುಂಬದವರು ನಿಂಗಪ್ಪ ವರಗನವರ ಸ್ಮರಣಾರ್ಥವಾಗಿ ₹1.50 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಗ್ರಂಥಾಲಯ ನಿರ್ಮಿಸಿದ್ದಾರೆ. ಇದನ್ನು ಇಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೊಂದಿಗೆ, ಹಳೆಯ ವಿದ್ಯಾರ್ಥಿಗಳೂ ಬಳಸುತ್ತಿದ್ದಾರೆ. ಗ್ರಾ.ಪಂ ಸದಸ್ಯ ವಿಠ್ಠಲ ಗುಡಗುಡಿ ₹1 ಲಕ್ಷ ವೆಚ್ಚದಲ್ಲಿ 259 ಮಕ್ಕಳಿಗೆ ಟೀ ಶರ್ಟ್, ಪ್ಯಾಂಟ್ ವಿತರಿಸಿದ್ದಾರೆ