ಹುಬ್ಬಳ್ಳಿ: ವಿವಾದದಿಂದಲೇ ಸುದ್ದಿಯಾಗುತ್ತಿರುವ ಕಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಎಡವಟ್ಟು ನಡೆದಿದೆ. ಇದೀಗ ಕಿಮ್ಸ್ ಆರೋಗ್ಯ ಅಧಿಕಾರಿಗಳು ಮಾಡಿದ ಕೆಲಸದಿಂದ ಮನೆಯ ಹಿರಿಯನ ಮುಖವನ್ನು ನೋಡದೇ ಅಂತ್ಯಕ್ರಿಯೆ ಮಾಡುವಂತ ಪರಿಸ್ಥಿತಿ ತಂದಿಟ್ಟಿರುವುದು ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸುಳ್ಳ ಗ್ರಾಮದ 72 ವರ್ಷದ ವೃದ್ಧ ಬಸಪ್ಪ ಹುಬ್ಬಳ್ಳಿ ನೆಗಡಿ ಹಾಗೂ ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಅವರನ್ನು ಕೋವಿಡ್ ವಾರ್ಡಿಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಕೋವಿಡ್ ಇದೆ ಎಂಬ ಮಾಹಿತಿ ಕೇಳಿ ಬಸಪ್ಪ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಹೀಗಾಗಿ ವೃದ್ಧನ ಅಂತ್ಯಕ್ರಿಯೆ ಕೋವಿಡ್ ನಿಯಮಾನುಸಾರ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಡಿದ್ದಾರೆ.
ಮೃತಪಟ್ಟ ವೃದ್ಧರ ವರದಿ ಬಂದಿದ್ದು, ವರದಿಯಲ್ಲಿ ಕೊರೊನಾ ನೆಗೆಟಿವ್ ಅಂತಾ ದೃಢಪಟ್ಟಿದೆ. ಹೀಗಾಗಿ ವೃದ್ಧನ ಕುಟುಂಬಸ್ಥರು ಕಿಮ್ಸ್ ವೈದ್ಯರ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಅಲ್ಲದೇ ಕೊನೆ ಕ್ಷಣದಲ್ಲಿ ಅಂತಿಮ ದರ್ಶನವನ್ನು ಮಾಡಲಾಗದೇ ಅಂತ್ಯಕ್ರಿಯೆ ಮಾಡುವಂತೆ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.