Breaking News

ಸರ್ವಾಧಿಕಾರಿ ಶಕ್ತಿಗಳಿಗೆ ಸೋಲಾಗಲಿ. ಎನ್ನುತ್ತಲೇ ಕಾಂಗ್ರೆಸ್​ ಸೇರ್ಪಡೆಯಾದ ವೈಎಸ್‌ವಿ ದತ್ತ, ಎಚ್​.ನಾಗೇಶ್​

Spread the love

ಬೆಂಗಳೂರು: ಜೆಡಿಎಸ್​ನ ಮಾಜಿ ಶಾಸಕ ವೈಎಸ್‌ವಿ ದತ್ತಾ, ಪಕ್ಷೇತರ ಶಾಸಕ ಎಚ್.ನಾಗೇಶ್, ‌ಮೈಸೂರು ಮೂಡ ಮಾಜಿ ಅಧ್ಯಕ್ಷ ಮೋಹನ್ ಕುಮಾರ್ ಅವರು ಶನಿವಾರ ಕಾಂಗ್ರೆಸ್ ಸೇರ್ಪಡೆಯಾದರು. ಇವರನ್ನು ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು.

 

ಈ ವೇಳೆ ಕಾರ್ಯಕರ್ತರು ಪಟಾಕಿ ಸಿಡಿಸಿ ಜೈಕಾರ ಕೂಗಿದರು. ವೈಎಸ್​ವಿ ದತ್ತ ಮಾತನಾಡಿ, ಇದು ಮಾತನಾಡುವ ಸಮಯವಲ್ಲ, ಕೆಲಸ ಮಾಡುವ ಸಮಯ. ಕಳೆದ ಹಲವು ದಶಕಳಿಂದ ನಾನು ಒಂದೇ ಪಕ್ಷದಲ್ಲಿದ್ದೆ. ಆದರೆ ಈಗ ಈ ತೀರ್ಮಾನ ತೆಗೆದುಕೊಂಡಿದ್ದೇನೆ. ಇದು ನಮ್ಮ ರಾಷ್ಟ್ರದ ತುರ್ತು ಅಗತ್ಯವಾಗಿದೆ. ಸರ್ವಾಧಿಕಾರಿ ಶಕ್ತಿಗಳಿಗೆ ಸೋಲಾಗಲಿ ಎಂದು ಯಾವುದೇ ಶರತ್ತುಗಳಿಲ್ಲದೆ ಪಕ್ಷ ಸೇರುತ್ತಿದ್ದೇನೆ. ನಾನು ಮೊದಲಿನಿಂದಲೂ ಎಡಪಂಥೀಯ. ಹೀಗಾಗಿ ನಂಗೆ ಅತ್ಯಂತ ಹತ್ತಿರ ಎನಿಸಿದ ಕಾಂಗ್ರೆಸ್ ಪಕ್ಷ ಸೇರುತ್ತಿದ್ದೇನೆ. ಕ್ಷೇತ್ರದಲ್ಲೂ ಮುಖಂಡರು, ಕಾರ್ಯಕರ್ತರೊಂದಿಗೆ ಚರ್ಚಿಸಿದ್ದೇನೆ. ನಾನು ಕಾರ್ಯಕರ್ತನಾಗಿ, ಕಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲವು ತಂದುಕೊಡಲು ಶ್ರಮಿಸುತ್ತೇನೆ. ನನಗೀಗ 70 ವರ್ಷ. ಆದರೂ ನನಗೆ ಶಕ್ತಿಯಿದೆ ಎಂದರು.

ಶಾಸಕ ನಾಗೇಶ್ ಮಾತನಾಡಿ, ನಂಗೆ ಕಾಂಗ್ರೆಸ್ ಸಿದ್ಧಾಂತಗಳು ಇಷ್ಟ ಆಗಿ ಸೇರುತ್ತಿದ್ದೇನೆ. ನನ್ನ ತಂದೆ ತಾಯಿಯೂ ಕಾಂಗ್ರೆಸ್​ಗೆ ಮತ ಹಾಕುತ್ತಿದ್ದರು. ರಾಜ್ಯಾದ್ಯಂತ ಪ್ರವಾಸ ಮಾಡಿ ನಮ್ಮ ಜನಾಂಗಕ್ಕೆ ತಿಳಿಹೇಳುತ್ತೇನೆ. ಕಾಂಗ್ರೆಸ್ ದಾರಿಯೇ ನನ್ನ ದಾರಿ. ಇನ್ಮುಂದೆ ನಾನು ಎಲ್ಲೂ ಹೋಗಲ್ಲ. ಸ್ವಂತ ಬಲದ ಮೇಲೆ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಎಂದರು.

ಡಿಕೆಶಿ ಮಾತನಾಡಿ, ಇವತ್ತು ಮಕರ ಸಂಕ್ರಮಣ. ರೈತರ ಬದುಕು ಶುಭಾರಂಭ ಆಗುವ ಕ್ಷಣ. ಇಂಥಾ ಪವಿತ್ರ ದಿನದಂದು ಪ್ರಮುಖ ನಾಯಕರಾದ ವೈಎಸ್‌ವಿ ದತ್ತ, ಎಚ್​.ನಾಗೇಶ್ ಅವರು ಪಕ್ಷ ಸೇರ್ಪಡೆ ಆಗಿದ್ದಾರೆ. ಬಿಜೆಪಿ ಕೊಟ್ಟ ಅಧಿಕಾರವನ್ನ ತ್ಯಾಗ ಮಾಡಿ ನಾಗೇಶ್ ಕಾಂಗ್ರೆಸ್​ ಸೇರಿದ್ದಾರೆ. ವೈಎಸ್‌ವಿ ದತ್ತ ಅವರನ್ನ 48 ವರ್ಷದಿಂದ ಬಲ್ಲೆ. ದತ್ತಾ ಅವರು ಪಾಠ ಹೇಳುವಾಗ ನ್ಯಾಷನಲ್ ಕಾಲೇಜಿನಲ್ಲಿ ನಾನು ಸ್ಟೂಡೆಂಟ್. ಜೆಡಿಎಸ್​ನಲ್ಲಿ ಭವಿಷ್ಯ ಇಲ್ಲ ಎಂಬುದನ್ನ ಗಮನದಲ್ಲಿಟ್ಟುಕೊಂಡು ಪಕ್ಷಕ್ಕೆ ಬಂದಿದ್ದಾರೆ. ಇದು ಆರಂಭ ಮಾತ್ರ. ಇನ್ಮುಂದೆ ವಾರಕ್ಕೊಮ್ಮೆ ಅಥವಾ ಮೂರು ದಿನಕ್ಕೊಮ್ಮೆ ಪಕ್ಷ ಸೇರ್ಪಡೆ ಕಾರ್ಯಕ್ರಮ ಆಗುತ್ತವೆ. ಇದು ಕಾಂಗ್ರೆಸ್ ಪರ್ವ ಎಂದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಪಕ್ಷ ಸೇರ್ಪಡೆ ಆದವರಿಗೆ ಸ್ವಾಗತ ಬಯಸುತ್ತೇನೆ. ಇಡೀ ದೇಶದಲ್ಲಿ ಹೆಚ್ಚು ಕಾಲ ಇರುವ ಪಕ್ಷ ಕಾಂಗ್ರೆಸ್. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್. ಉಳಿದವೆಲ್ಲವೂ ಸ್ವಾತಂತ್ರ್ಯ ನಂತರ ಹುಟ್ಟಿಕೊಂಡ ಪಕ್ಷಗಳು. ನಾವೆಲ್ಲಾ ಜನತಾ ಪಾರ್ಟಿಯಲ್ಲಿ ಇದ್ದವರು. ಜನತಾ ಪಾರ್ಟಿ ವಿಭಾಗ ಆಗಿ ಜೆಡಿಎಸ್ ಜೆಡಿಯು ಆಗಿ ಇಬ್ಭಾಗವಾಯ್ತು. ದತ್ತ ಜೆಡಿಎಸ್​ನಲ್ಲೇ ಉಳಿದುಕೊಂಡವರು. ಈಗ ನಮ್ಮೊಂದಿಗಿದ್ದಾರೆ ಎಂದರು.


Spread the love

About Laxminews 24x7

Check Also

ಬೆಳಗಾವಿ ಜಲಾಶಯಗಳಲ್ಲಿ ಜೀವಕಳೆ

Spread the love ಬೆಳಗಾವಿ: ಜಿಲ್ಲೆಯಲ್ಲಿ ಈ ಬಾರಿ ಪೂರ್ವ ಮುಂಗಾರು ಉತ್ತಮವಾಗಿದೆ. ಜೂನ್‌ ಅಂತ್ಯದವರೆಗೆ ಮುಂಗಾರು 286.46 ಮಿ.ಮೀ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ