ಯಡಿಯೂರಪ್ಪನವರು ಸಿಎಂ ಹುದ್ದೆಗೆ ಪದತ್ಯಾಗ ಮಾಡಿದ ಸನ್ನಿವೇಶವನ್ನೊಮ್ಮೆ ಮೆಲುಕು ಹಾಕಿಕೊಳ್ಳೋಣ. ಕರ್ನಾಟಕದ ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವ ಚರ್ಚೆ ಜೋರಾಗಿಯೇ ನಡೆಯುತ್ತಿತ್ತು. ಬಿಜೆಪಿಯ ವರಿಷ್ಠರು ಕೂಡಾ ಕೊಂಚ ಸುಳಿವನ್ನೂ ಬಿಟ್ಟುಕೊಟ್ಟಿರಲಿಲ್ಲ.
ಅರವಿಂದ್ ಬೆಲ್ಲದ್, ಜಗದೀಶ್ ಶೆಟ್ಟರ್, ಬಸನಗೌಡ ಪಾಟೀಳ್ ಯತ್ನಳ್, ಬೊಮ್ಮಾಯಿ ಈ ರೀತಿ ಹಲವು ಹೆಸರುಗಳು ಸಿಎಂ ಅಭ್ಯರ್ಥಿ ಎಂದು ಮುನ್ನಲೆಗೆ ಬರುತ್ತಿತ್ತು. ಆ ಸಂದರ್ಭದಲ್ಲಿ ಮುನ್ನಲೆಗೆ ಬಂದಿದ್ದ ಇನ್ನೊಂದು ಹೆಸರೆಂದರೆ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀಗಳಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರದ್ದು.
ಇದಕ್ಕೆ ಕಾರಣ ಇಲ್ಲದಿರಲ್ಲಿಲ್ಲ, ಯಾಕೆಂದರೆ ಉತ್ತರ ಪ್ರದೇಶದ ಗೋರಖನಾಥ ಮಠ ಮತ್ತು ಆದಿಚುಂಚನಗಿರಿ ಮಠವು ನಾಥ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿರುವಂತದ್ದು. ಇದಲ್ಲದೇ, ಗೋರಖನಾಥ ಮಠದ ಪೀಠಾಧಿಪತಿಯೂ, ಉತ್ತರ ಪ್ರದೇಶದ ಸಿಎಂ ಕೂಡಾ ಆಗಿರುವ ಯೋಗಿ ಆದಿತ್ಯನಾಥ್ ಅವರು ಆ ವೇಳೆ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದರು.
ಒಕ್ಕಲಿಗ ಸಮುದಾಯದ ಪ್ರಮುಖ ಪೀಠವಾಗಿರುವುದರಿಂದ, ಆದಿಚುಂಚನಗಿರಿ ಶ್ರೀಗಳ ಹೆಸರು ಆ ವೇಳೆ ಮುನ್ನಲೆಗೆ ಬಂದಿತ್ತು. ಆದರೆ, ಬಸವರಾಜ ಬೊಮ್ಮಾಯಿಯವರ ಹೆಸರನ್ನು ಯಡಿಯೂರಪ್ಪ ಸೂಚಿಸಿದ್ದರಿಂದ ಅವರು ಸಿಎಂ ಆದರು. ಈಗ ಮತ್ತೆ, ಬಿಜೆಪಿಯ ಮುಂದಿನ ಸಿಎಂ ನಿರ್ಮಲಾನಂದ ಶ್ರೀಗಳು ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಸಚಿವ ಆರ್.ಆಶೋಕ್ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಸ್ಪಷ್ಟನೆಯನ್ನು ನೀಡಿದ್ದಾರೆ.