ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸುವ ವಿಚಾರದಲ್ಲಿ 3-4 ಜಿಲ್ಲೆಗಳು ಮಾತ್ರ ಹಿಂದುಳಿದಿದ್ದು, ಸಂಕ್ರಾಂತಿಯೊಳಗೆ ಮೊದಲ ಪಟ್ಟಿ ಬಿಡುಗಡೆಗೊಳಿಸುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಳಿ ಮಹತ್ವದ ಚರ್ಚೆ ನಡೆಸಿದ್ದಾರೆ.
ಭಾನುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಭೇಟಿ ನೀಡಿ ಹೊಸ ವರ್ಷದ ಶುಭಾಶಯ ತಿಳಿಸಿದ ಬಳಿಕ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸುದೀರ್ಘ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಶಿಫಾರಸಿಗೆ ಜಿಲ್ಲಾ ಸಮಿತಿಗಳಿಗೆ ಡಿ.31ರವರೆಗೆ ಗಡುವು ನೀಡಲಾಗಿತ್ತು. 3-4 ಜಿಲ್ಲೆಗಳಲ್ಲಿ ಇನ್ನೂ ಸಭೆ ನಡೆದಿಲ್ಲ. ಮೂರು ದಿನಗಳಲ್ಲಿ ಲಿಸ್ಟ್ ಕಳುಹಿಸಲಿದ್ದು, ಬಳಿಕ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಹೀಗಾಗಿ ಸಂಕ್ರಾಂತಿಯೊಳಗೆ ಮೊದಲ ಪಟ್ಟಿಬಿಡುಗಡೆ ಸಾಧ್ಯತೆಯಿದೆ.