ಖಾನಾಪುರ: ಗಡಿಭಾಗದ ಕನ್ನಡೇತರರಿಗೂ ಕನ್ನಡ ಭಾಷೆ-ಅನ್ನದ ಭಾಷೆ ಎಂಬ ಸತ್ಯವನ್ನು ಮನವರಿಕೆ ಮಾಡುವ ಕೆಲಸವಾಗಬೇಕು ಎಂದು ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಈಶ್ವರ ಸಂಪಗಾವಿ ಹೇಳಿದರು. ಅವರು ಪಟ್ಟಣದ ಶನಯಾ ಪಾಮ್ಸ್ ಕಲ್ಯಾಣ ಮಂಟಪದಲ್ಲಿ ನಡೆದ 8ನೇ ತಾಲೂಕಾ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.
ಗಡಿ ಭಾಗದಲ್ಲಿ ಸಾಹಿತ್ಯ ಪರಸ್ಪರ ವಿನಿಮಯಗೊಳ್ಳುವುದರ ಮೂಲಕ ಭಾವನೆಗಳನ್ನು ಬೆಸೆಯುವ ಕಾರ್ಯವಾಗಬೇಕು. ಅನ್ಯ ಭಾಷೆ ವ್ಯಾಮೋಹದಲ್ಲಿ ಮಾತೃಭಾಷೆ ಕೊಚ್ಚಿ ಹೋಗದಂತೆ ಮಕ್ಕಳಲ್ಲಿ ಸ್ವಾಭಿಮಾನ ಬೆಳೆಸಬೇಕು. ತಾಲೂಕಲ್ಲಿ ಸಾಕ್ಷರತೆ ಪ್ರಮಾಣ ಕಡಿಮೆ ಇರುವ ಕುರಿತು ಕಳವಳ ವ್ಯಕ್ತಪಡಿಸಿದರಲ್ಲದೆ ಇದಕ್ಕೆ ಕ್ರಿಯಾಯೋಜನೆ ಜಾರಿಗೊಳ್ಳ ಬೇಕು ಎಂದು ಆಗ್ರಹಿಸಿದರು. ತಾಲೂಕು ಸಂಸ್ಕೃತಿ, ಪರಂಪರೆ, ನೈಸರ್ಗಿಕ ಸಿರಿ ಹೊಂದಿರುವ
ವಿಶಿಷ್ಟ ಭೂ ಪ್ರದೇಶವಾಗಿದ್ದು ದೇಶದ ಬೆನ್ನೆಲುಬಾದ ಕೃಷಿ ಕ್ಷೇತ್ರವನ್ನು ಉದ್ಯೋಗವಾಗಿ ಪರಿಗಣಿಸ ಬೇಕು.
ಯಾವ ಕಾರಣಕ್ಕೂ ಗಡಿ ಭಾಗದ ಶಾಲೆಗಳನ್ನು ಮುಚ್ಚಬಾರದು. ಯುವಕರಿಗೆ ಉದ್ಯೋಗಕ್ಕಾಗಿ ಉದ್ಯಮಗಳ ಸ್ಥಾಪನೆಯಾಗಬೇಕು. ಹಲಸಿಯಲ್ಲಿ ಕದಂಬೋತ್ಸವಕ್ಕೆ ಮತ್ತೆ ಚಾಲನೆ ನೀಡಬೇಕು ಎಂದು ಒತ್ತಾಯಿಸಿದರು.
ಶಾಸಕಿ ಡಾ| ಅಂಜಲಿ ನಿಂಬಾಳಕರ ಮಾತನಾಡಿ, ಭಾಷೆ, ಜಾತಿ-ಧರ್ಮಗಳ ವ್ಯತ್ಯಾಸ ಮಾಡದೆ ಎಲ್ಲರು ಸೌಹಾರ್ದಯುತವಾಗಿ ಸಾಮರಸ್ಯದಿಂದ ಬದುಕಬೇಕು. ತಾವು ಮಹಾರಾಷ್ಟ್ರದಲ್ಲಿ ಹುಟ್ಟಿದರೂ ಇದು ಕರ್ಮಭೂಮಿಯಾಗಿದ್ದು ನಾಡು-ನುಡಿ ವಿಷಯದಲ್ಲಿ ಯಾವತ್ತೂ ಬದ್ಧತೆ ತೋರುತ್ತಿರುವೆ ಎಂದರು. ಕಳೆದ 60 ವರ್ಷಗಳಿಂದ ಇಲ್ಲಿಯ ನಾಯಕರು ರಾಜ್ಯೋತ್ಸವ, ಕನ್ನಡ ಸಮಾರಂಭಗಳಲ್ಲಿ ಭಾಗವಹಿಸಲು ಹಿಂಜಿರಿಯುತ್ತ ಬಂದಿದ್ಧರು. ತಾವು ಈ ನಾಡಭಾಷೆಗೆ ಗೌರವ ಕೊಡುವುದರ ಮೂಲಕ ಹೊಸ ನಾಂದಿ ಹಾಡಿರುವೆ ಎಂದರು.