ಸುವರ್ಣವಿಧಾನಸೌಧ: ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಸೇರಿದಂತೆ ರಾಜ್ಯದ ಐದಾರು ಜಿಲ್ಲೆಗಳಲ್ಲಿರುವ ಕುಮ್ಕಿ ಜಮೀನು ಸಮಸ್ಯೆ ಕುರಿತಾಗಿ ಸಾಧಕ-ಬಾಧಕಗಳು, ಕಾನೂನು ಪರಿಣಾಮಗಳನ್ನು ಕೂಲಂಕುಷವಾಗಿ ಚರ್ಚಿಸಿ ಪರಿಹಾರ ರೂಪದಲ್ಲಿ ಹೊಸ ಕಾಯ್ದೆ ತರುವ ಚಿಂತನೆ ಸರ್ಕಾರದ್ದಾಗಿದೆ ಎಂದು ಕಂದಾಯ ಸಚಿವ ಆರ್.
ಅಶೋಕ್ ಹೇಳಿದ್ದಾರೆ.
ಪರಿಷತ್‌ನಲ್ಲಿ ಬುಧವಾರ ಬಿಜೆಪಿ ಸದಸ್ಯ ಪ್ರತಾಪ ಸಿಂಹ ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರದಲ್ಲಿ ಸರ್ಕಾರ ಸಕಾರಾತ್ಮಕ ಚಿಂತನೆ ಹೊಂದಿದೆ ಎಂದು ತಿಳಿಸಿದರು.
ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಕೊಡಗು ಇನ್ನಿತರ ಜಿಲ್ಲೆಗಳಲ್ಲಿ ಕಾನೆ, ಬಾನೆ ಹೊಂದಿರುವವರಿಗೆ ಕಮ್ಕಿ ಸಕ್ರಮೀಕರಣ ವಿಚಾರ ಸುಲಭದ್ದಲ್ಲ. ಬ್ರಿಟಿಷರ ಆಳ್ವಿಕೆಯಲ್ಲಿ ಸೊಪ್ಪು ಬೆಳೆಯಲೆಂದು ನೀಡಿದ ಜಮೀನು ಇದಾಗಿದೆ. ಇದನ್ನು ಸಕ್ರಮೀಕರಣಗೊಳಿಸಿ ಉಳಿಮೆ ಮಾಡುವ ರೈತರಿಗೆ ನೀಡುವುದಕ್ಕೆ ಸುಲಭದ ಸ್ಥಿತಿ ಇಲ್ಲ. ಇದಕ್ಕೆ ಕೋರ್ಟ್ ಆದೇಶ, ನಿಯಮಾವಳಿಗಳು ಪ್ರಬಲವಾಗಿದ್ದು, ಇದಕ್ಕೆ ಹೊಸ ಕಾಯ್ದೆ ತರುವುದೇ ಪರಿಹಾರವಾಗಿದೆ.
ಗೋಮಾಳ, ಗಾಯರಾಣ, ಹುಲ್ಲಬನ್ನಿ, ಸೊಪ್ಪಿನಬೆಟ್ಟ ಇತ್ಯಾದಿ ಗ್ರಾಮೀಣ ಪ್ರದೇಶದಲ್ಲಿ ಇರುವ ಜಮೀನು ಮಂಜೂರಿಗೆ ನನ್ನ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಈ ವಿಷಯ ಅತ್ಯಂತ ಸಂಕೀರ್ಣವಾಗಿದ್ದು, ಅರಣ್ಯ, ಕಾನೂನು ಇಲಾಖೆಯೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯ ಅಡ್ವೊಕೇಟ್ ಜನರಲ್ ಅವರೊಂದಿಗೆ ಚರ್ಚಿಸಲಾಗುವುದು. ಕುಮ್ಕಿ, ಸೊಪ್ಪಿನ ಬೆಟ್ಟ ಇತ್ಯಾದಿ ಜಮೀನು ಸಕ್ರಮೀಕರಣಕ್ಕೆ ಎಷ್ಟು ಜಮೀನು, ಎಲ್ಲಿ ಎಂಬ ಪ್ರಶ್ನೆಗಳು ಉದ್ಭವಿಸುತ್ತೆವೆ. ಕೇಂದ್ರ ಸರಕಾರದ ನಿಯಮದಂತೆ ಐದು ಎಕರೆಗಿಂತ ಕಡಿಮೆ ಜಮೀನು ನೀಡಬೇಕಾಗಿದೆ. ಇದನ್ನು ನೀಡಬೇಕಾದರೆ ಕಾನೂನು ತೊಡಕುಗಳು ಎದುರಾಗಲಿದ್ದು, ಈಗಾಗಲೇ ಅರಣ್ಯ ಇಲಾಖೆಯವರು ಜಮೀನು ತಮ್ಮ ಮಾಲಿಕತ್ವದ ಕುರಿತಾಗಿಪತ್ರ ಬರೆದಿದ್ದಾರೆ ಎಂದು ಹೇಳಿದರು.
ಈ ವಿಚಾರವಾಗಿ ಸರಕಾರ ಕೇವಲ ಸುತ್ತೋಲೆಗಳನ್ನು ಹೊರಡಿಸಿ ಕ್ರಮ ಕೈಗೊಂಡರೆ ಕೋರ್ಟ್‌ನಲ್ಲಿ ಇದು ನಿಲ್ಲದು. ಇದಕ್ಕೆ ಇರುವ ಏಕೈಕ ಮಾರ್ಗಎಂದರೆ ನೂತನ ಕಾಯ್ದೆಯಾಗಿದೆ. ಜತೆಗೆ ಈ ತರಹದ ಜಮೀನು ನೀಡಿಕೆ ವಿಚಾರದಲ್ಲೂ ಜಾಗೃತಿ ಹೆಜ್ಜೆ ಇರಿಸಬೇಕಾಗಿದೆ.ಇದೇ ಮಾದರಿಯ ಜಮೀನು ಪಟ್ಟಣ, ನಗರ ಪ್ರದೇಶದಲ್ಲಿಯೂ ಇದ್ದು, ಅದಕ್ಕೂ ನೂತನ ಕಾಯ್ದೆಯಲ್ಲಿ ಅವಕಾಶ ನೀಡಿದರೆ ಭೂಮಾಫಿಯಾಕ್ಕೆ ಲಾಭ ಮಾಡಿಕೊಟ್ಟಂತಾಗಲಿದೆ. ಅದಕ್ಕಾಗಿ ಇದನ್ನು ಕೇವಲ ಗ್ರಾಮೀಣ ಪ್ರದೇಶಳಿಗೆ ಸೀಮಿತಗೊಳಿಸುವ 2ರಿಂದ 5 ಎಕರೆಯ ಒಳಗಿನ ಜಮೀನು ಸಕ್ರಮೀಕರಣಗೊಳಿಸುವ ಚಿಂತನೆ ಇದೆ ಎಂದು ವಿವರಿಸಿದರು.