ಬೆಳಗಾವಿ: ಬೇಕಾಬಿಟ್ಟಿಯಾಗಿ ಅಡಿಕೆ ಬೆಳೆಯನ್ನು ಬಯಲುಸೀಮೆ ಸಹಿತ ಹಲವು ಜಿಲ್ಲೆಗಳಲ್ಲಿ ವಿಸ್ತರಣೆ ಮಾಡುತ್ತಿರುವುದು ಅಪಾಯಕಾರಿ. ಇದರಿಂದ ಮುಂದೆ ಬೆಳೆಗಳ ಅಸಮತೋಲನ ಉಂಟಾಗುವ ಭೀತಿ ಇದೆ ಎಂಬ ಕಳವಳ ಬುಧವಾರ ವಿಧಾನಸಭೆಯಲ್ಲಿ ವ್ಯಕ್ತವಾಯಿತು.
ಕೃಷಿ ಎದುರಿಸುತ್ತಿರುವ ಅತಿವೃಷ್ಟಿ ಮತ್ತಿತರ ಸಮಸ್ಯೆಗಳಿಂದ ರೈತರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ನಡೆಯುತ್ತಿದ್ದ ಚರ್ಚೆ ವೇಳೆ ಗೃಹಸಚಿವ ಆರಗ ಜ್ಞಾನೇಂದ್ರ ವಿಷಯ ಪ್ರಸ್ತಾವಿಸಿ, ಅಡಿಕೆ ಬೆಳೆ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸುವುದನ್ನು ನೋಡಿದರೆ ಅದುವೇ ರೈತರಿಗೆ ಮಾರಕವಾಗುವ ದಿನಗಳು ದೂರವಿಲ್ಲ, ಅಡಿಕೆಗೆ ಎಲ್ಲ ಸರಕಾರಗಳೂ ನೀಡುವ ಪ್ರೋತ್ಸಾಹವನ್ನು ಕಡಿಮೆ ಮಾಡಬೇಕಿದೆ.
ಹೀಗೆ ಹೇಳಿದರೆ ರೈತರ ಆಕ್ರೋಶ ಎದುರಿಸಬೇಕಾಗುತ್ತದೆ ಎನ್ನುವ ಅರಿವಿದೆ. ಆದರೂ ಇದೇ ರೀತಿ ಅಡಿಕೆ ಬೆಳೆ ವಿಸ್ತರಣೆಯಾದರೆ 5-10 ವರ್ಷಗಳಲ್ಲಿ ಬೆಲೆ ಕುಸಿತವಾಗಿ ಅಡಿಕೆ ಮರಗಳನ್ನೇ ಕಡಿದು ಹಾಕಬೇಕಾದೀತು ಎಂದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರೂ ಇದಕ್ಕೆ ಪೂರಕವಾಗಿ ಮಾತನಾಡಿದರು