ಬೆಳಗಾವಿ: ‘ರಾಜ್ಯ ಬಿಜೆಪಿ ಸರ್ಕಾರ ಸುವರ್ಣಸೌಧದ ವಿಧಾನಸಭೆ ಸಭಾಂಗಣದಲ್ಲಿ ವೀರ ಸಾವರ್ಕರ್ ಅವರ ಭಾವಚಿತ್ರ ಅಳವಡಿಸುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನನಗೆ ಅನಾವರಣ ಕಾರ್ಯಕ್ರಮಕ್ಕೆ ಆಹ್ವಾನ ಸಿಕ್ಕಿಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಭಾನುವಾರ ರಾಜ್ಯ ಕಾಂಗ್ರೆಸ್ ಚುನಾವಣೆ ಪ್ರಚಾರ ಸಮಿತಿ ಸಭೆಗೂ ಮುನ್ನ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸಾವರ್ಕರ್ ಸೇರಿದಂತೆ ಇನ್ನಿತರ ವ್ಯಕ್ತಿಗಳ ಭಾವಚಿತ್ರ ಅನಾವರಣಕ್ಕೆ ಎಲ್ಲರನ್ನೂ ಆಹ್ವಾನಿಸಲಾಗಿದೆ ಎಂದು ಸ್ಪೀಕರ್ ಹೇಳುತ್ತಿದ್ದಾರೆ. ನನಗಂತೂ ಯಾವುದೇ ಆಹ್ವಾನ ಬಂದಿಲ್ಲ. ಸಾವರ್ಕರ್ ಭಾವಚಿತ್ರ ಅಳವಡಿಸಿರುವುದರ ಬಗ್ಗೆ ವೈಯಕ್ತಿಕ ಅಭಿಪ್ರಾಯಕ್ಕಿಂತ ಪಕ್ಷದ ಅಭಿಪ್ರಾಯ ಮುಖ್ಯ. ಇದು ಚುನಾವಣಾ ಪ್ರಚಾರ ಸಮಿತಿ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ. ಬಳಿಕ ಮುಂದಿನ ನಿಲುವು ತೀರ್ಮಾನವಾಗಲಿದೆ ಎಂದರು.
ಇನ್ನು ವಿಧಾನಸಭೆ ಚುನಾವಣೆಗೆ ಟಿಕೆಟ್ ವಿತರಣೆಗಾಗಿ ಆಕಾಂಕ್ಷಿಗಳಿಂದ ಎರಡು ಲಕ್ಷ ರೂ.ಪಡೆಯುತ್ತಿರುವ ಬಗ್ಗೆ ಎಲ್ಲಿಯೂ ಅಪಸ್ವರ ಕೇಳಿಬಂದಿಲ್ಲ. ಪಕ್ಷ ಸಂಘಟನೆಗಾಗಿ ಆಕಾಂಕ್ಷಿಗಳು ಖುಷಿಯಿಂದಲೇ ನೀಡುತ್ತಿದ್ದಾರೆ. ಅಭ್ಯರ್ಥಿಗಳ ಆಯ್ಕೆಗೆ ಕೆಲವು ಮಾನದಂಡಗಳಿವೆ, ಅವುಗಳನ್ನು ಅನ್ವಯಿಸಿಕೊಂಡೇ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು
Laxmi News 24×7