ಬೆಂಗಳೂರು: ತೂಕ ಮತ್ತು ಅಳತೆಯ ವ್ಯತ್ಯಾಸ ಪತ್ತೆ ಹಚ್ಚಲು ಸಕ್ಕರೆ ಇಲಾಖೆಯ ಆಯುಕ್ತರ ನೇತೃತ್ವದಲ್ಲಿ ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ನಡೆದಿದೆ. ಸಕ್ಕರೆ ಇಲಾಖೆಯ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.
21 ಕಾರ್ಖಾನೆ ಪೈಕಿ ಕೆಲವೊಂದು ಸಕ್ಕರೆ ಕಾರ್ಖಾನೆಗಳಲ್ಲಿ ತೂಕದ ವ್ಯತ್ಯಾಸ ಕಂಡುಬಂದಿದ್ದು ಅಧಿಕಾರಿಗಳಿಂದ ಪರಿಶೀಲನೆ ಮುಂದುವರಿಯುತ್ತಿದೆ. ಪ್ರಥಮ ಹಂತದಲ್ಲಿ 21 ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ಮಾಡಿದ್ದು, ಈ ಸಾಲಿನ ಕಬ್ಬು ಕಟಾವು ಹಂಗಾಮು ಮುಗಿಯುವವರೆಗೂ ನಿರಂತರವಾಗಿ ಗೌಪ್ಯತೆಯ ಮೂಲಕ ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ನಡೆಸಲು ಸರ್ಕಾರದಿಂದ ತೀರ್ಮಾನವಾಗಿತ್ತು.
ಹಲವು ರೈತ ಸಂಘಟನೆಗಳು ತೂಕದಲ್ಲಿ ವ್ಯತ್ಯಾಸ ಕಂಡುಬರುವ ಕುರಿತು ತನಿಖೆ ನಡೆಸುವಂತೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಇವರ ಬಳಿ ಒತ್ತಾಯಿಸಿದ್ದರು. ಈ ಬಗ್ಗೆ ಶೀಘ್ರದಲ್ಲೇ ಸಿಹಿ ಸುದ್ದಿ ನೀಡುವುದಾಗಿ ಸಚಿವರು ಭರವಸೆ ನೀಡಿದ್ದರು.
ಬೆಳಗಾವಿ-8, ಬಿಜಾಪುರ – 4, ಬಾಗಲಕೋಟೆ – 4, ಬೀದರ್ – 2, ಗುಲಬರ್ಗ – 2 ಹಾಗೂ ಕಾರವಾರ – 1 ಕಾರ್ಖಾನೆಗಳ ಮೇಲೆ ದಾಳಿ ನಡೆದಿದೆ. ಸಕ್ಕರೆ ಇಲಾಖೆಯ ಆಯುಕ್ತರಾದ ಶಿವಾನಂದ್ ಹೆಚ್. ಕಲಕೇರಿ ಇವರ ನೇತೃತ್ವದಲ್ಲಿ ಈ ದಾಳಿ ನಡೆಸಿದ್ದು, ದಾಳಿಯಲ್ಲಿ ಸಕ್ಕರೆ ಇಲಾಖೆಯ ಅಧಿಕಾರಿಗಳು, ತೂಕ ಮತ್ತು ಅಳತೆ ಇಲಾಖೆಯ ಅಧಿಕಾರಿಗಳು, ಸಾರಿಗೆ ಇಲಾಖೆಯ ಅಧಿಕಾರಿಗಳು, ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಾಥ್ ನೀಡಿದ್ದರು.
Laxmi News 24×7