ಬೆಳಗಾವಿ: ಹೋಟೆಲ್ ವ್ಯಾಪಾರಿಯೊಬ್ಬರನ್ನು ಅಪಹರಣ ಮಾಡಿ ₹ 1 ಲಕ್ಷ ವಸೂಲಿ ಮಾಡಿದ್ದ ಏಳು ಆರೋಪಿಗಳನ್ನು ಮುರಗೋಡ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಬಾಳೇಶ ಹೊಂಡಪ್ಪನವರ, ಶ್ರೀಶೈಲ ಹೊಂಡಪ್ಪನವರ, ಬಂದೇನವಾಜ್ ಅತ್ತಾರ್, ರಮೇಶ ಚಂದರಗಿ, ಮಲ್ಲಪ್ಪ ಕೋಮರ್, ಇಮ್ರಾನ್ ಮುಲ್ಲಾ, ನಾಗಪ್ಪ ರಂಗಣ್ಣನವರ ಬಂಧಿತರು.
ಜಿಲ್ಲೆಯ ಯರಗಟ್ಟಿ ತಾಲ್ಲೂಕಿನ ಸೊಪ್ಪಾಡ್ಲ ಗ್ರಾಮದ ಸಾಬಣ್ಣ ಮೆಗಾಡಿ ಅವರನ್ನು ವಾರದ ಹಿಂದೆ ಸಾಬಣ್ಣ ಅವರನ್ನು ಯರಗಟ್ಟಿಯಲ್ಲಿ ಅಪಹರಿಸಿದ ಆರೋಪಿಗಳು, ಬೈಲಹೊಂಗಲ ತಾಲ್ಲೂಕಿನ ನೇಸರಗಿಗೆ ಕರೆತಂದಿದ್ದರು. ಅಲ್ಲಿ ಒಂದು ದಿನ ಒತ್ತೆ ಆಳಾಗಿ ಇಟ್ಟುಕೊಂಡು, ಜೀವ ಬೆದರಿಕೆ ಹಾಕಿ ಅವರಿಂದ ಹಣ ವಸೂಲಿ ಮಾಡಿದ್ದರು.
ಈ ಬಗ್ಗೆ ಸಾಬಣ್ಣ ಕುಟುಂಬದವರು ಮುರಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ರಾಮದುರ್ಗ ಡಿವೈಎಸ್‌ಪಿ ರಾಮನಗೌಡ ಹಟ್ಟಿ ಅವರ ನೇತೃತ್ವದಲ್ಲಿ ತಂಡ ರಚಿಸಿದ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ₹ 60 ಸಾವಿರ ನಗದು, ಚಾಕು, ಆರು ಮೊಬೈಲ್, ಒಂದು ಕಾರು ಜಪ್ತಿ ಮಾಡಲಾಗಿದೆ.