ವಿಜಯಪುರ: ದೇಶದೆಲ್ಲೆಡೆ ಜಾತಿ ಹೆಸರಲ್ಲಿ ಮತೀಯ ಸಂಘರ್ಷಗಳೇ ವಿಜೃಂಭಿಸಿ, ಸುದ್ದಿಯಾಗುತ್ತಿವೆ. ಈ ಹಂತದಲ್ಲೇ ಬಸವ ಜನ್ಮಭೂಮಿ ಮುಸ್ಲಿಂ ಭಕ್ತನೊಬ್ಬ ಹನುಮ ಮಾಲಾ ಧರಿಸಿ ಹನುಮ ಜನ್ಮಭೂಮಿ ಅಂಜನಾದ್ರಿ ಬೆಟ್ಟಕ್ಕೆ ಹೊರಡುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.
ಬಸವೇಶ್ವರ ಜನ್ಮಭೂಮಿಯಾದ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ನರಸಲಗಿ ಗ್ರಾಮದ ಜಾಫರ್ ಬೆಣ್ಣೆ ಎಂಬವರೇ ಭಾವೈಕ್ಯತೆ ಮೆರೆದ ಹನುಮಭಕ್ತ. ಹಣೆಗೆ ಗಂಧ, ತಿಲಕ ಇರಿಸಿ, ಕೇಸರಿ ವಸ್ತ್ರ ಧರಿಸಿ, ಕೊರಳಲ್ಲಿ ಹನುಮ ಮಾಲಾ ಧರಿಸಿ, ಹನುಮ ಮಾಲಾ ದೀಕ್ಷೆ ಪಡೆದಿರುವ ಜಾಫರ್ ಜಾತಿಗಿಂತ ಭಾವೈಕ್ಯತೆ ದೊಡ್ಡದು ಎನ್ನುತ್ತಾರೆ.
ಹನುಮ ಮಾಲೆ ಧರಿಸಿರುವ ಜಾಫರ್ ಉತ್ತರ ಕರ್ನಾಟಕದ ಪ್ರಸಿದ್ದ ಹಾಗೂ ಹನುಮ ಜನ್ಮಭೂಮಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಹೊರಟಿದ್ದಾರೆ. ಅಂಜನಾದ್ರಿ ಬೆಟ್ಟದಲ್ಲಿ ಹನುಮದೇವನಿಗೆ ಪೂಜೆ ಸಲ್ಲಿಸಿ ಮಾಲಾಧಾರ ವ್ರತ ಮುಕ್ತಾಯ ಮಾಡುವುದಾಗಿ ಜಾಫರ್ ಹೇಳುತ್ತಾರೆ.