ಹುಬ್ಬಳ್ಳಿ: ದಿಬ್ಬ ಏರುವಾಗ ತಾಂತ್ರಿಕ ಸಮಸ್ಯೆಯಿಂದ ಚಾಲಕನ ನಿಯಂತ್ರಣ ತಪ್ಪಿದ ನಗರ ಸಾರಿಗೆ ಬಸ್ ಕಂದಕಕ್ಕೆ ಉರುಳಿದ್ದು, ಚಾಲಕ ಹಾಗೂ ನಿರ್ವಾಹಕನ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ.
ಇಲ್ಲಿನ ಗೋಕುಲ ರಸ್ತೆ ಮೊರಾರ್ಜಿ ನಗರದಲ್ಲಿ ಸಿಬಿಟಿಯಿಂದ ಆರ್.ಎಂ. ಲೋಹಿಯಾ ನಗರಕ್ಕೆ ತೆರಳುತ್ತಿದ್ದ ನಗರ ಸಾರಿಗೆ ಬಸ್ ಬೆಳಗ್ಗೆ 11.30 ರ ಸುಮಾರಿಗೆ ದಿಬ್ಬ ಏರುವಾಗ ತಾಂತ್ರಿಕ ಸಮಸ್ಯೆಯಿಂದಾಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಹಿಂಬದಿಯಾಗಿ ಚಲಿಸಿ ರಸ್ತೆ ಪಕ್ಷದ ಕಂದಕಕ್ಕೆ ಜಾರಿದೆ.
ಈ ವೇಳೆ ಸಮಯ ಪ್ರಜ್ಞೆ ತೋರಿದ ನಿರ್ವಾಹಕ ಕೆಳಗೆ ಜಿಗಿದು ಬಸ್ ನ ಹಿಂದುಗಡೆ ಬರುತ್ತಿದ್ದ ವಾಹನ ಸವಾರರನ್ನು ಚದುರಿಸಿ ಹಿಂದಕ್ಕೆ ಕಳುಹಿಸಿದ್ದಾರೆ. ಬಸ್ ನಲ್ಲಿ ಸುಮಾರು ಎಂಟು ಪ್ರಯಾಣಿಕರು ಇದ್ದರು. ಅವರೆಲ್ಲ ಪ್ರಾಯಾಪಾಯದಿಂದ ಪಾರಾಗಿದ್ದಾರೆ.
ಬಸ್ ವಿದ್ಯುತ್ ಕಂಬ ನುಗ್ಗಿಕೊಂಡು ಸುಮಾರು ಏಳು ಅಡಿಯ ಕಂದಕಕ್ಕೆ ಜಾರಿದೆ. ಈ ಘಟನೆಗೆ ಬ್ರೇಕ್ ವೈಫಲ್ಯ ಕಾರಣ ಎನ್ನಲಾಗುತ್ತಿದೆ. ಬಸ್ ಮೇಲೆತ್ತಲು ಸಾರಿಗೆ ಸಿಬಂದಿ ಹರಸಾಹಸ ಪಟ್ಟರು. ಹೆಸ್ಕಾಂ ಸಿಬಂದಿ ಬಸ್ ನ ಹೊಡೆತಕ್ಕೆ ಮುರಿದುಬಿದ್ದ ಕಂಬ ತೆರವು ಮಾಡುತ್ತಿದ್ದಾರೆ.