Breaking News

ಯುವಕನಿಗೆ ಮದ್ವೆ ಆಸೆ ಹುಟ್ಟಿಸಿ ಹಾಸನದ ಮಹಿಳೆ ಹೀಗಾ ಮಾಡೋದು?

Spread the love

ವಿಜಯಪುರ: ಫೇಸ್​ಬುಕ್​ನಲ್ಲಿ ಪರಿಚಯವಾದ ಯುವಕನಿಗೆ ಈಕೆ ಕೊಟ್ಟ ಕಷ್ಟ ಅಷ್ಟಿಷ್ಟಲ್ಲ. ತಾನು ಐಎಎಸ್​ ಪಾಸ್​ ಮಾಡಿರುವೆ, ಕೆಲವೇ ದಿನಗಳಲ್ಲಿ ಜಿಲ್ಲಾಧಿಕಾರಿ ಆಗುವೆ. ನೀನಂದ್ರೆ ನನಗಿಷ್ಟ, ನಿನ್ನನ್ನೇ ಮದ್ವೆ ಆಗುವೆ ಎಂದೆಲ್ಲ ಹೇಳಿದ್ದಳು.

ಈಕೆಯ ಮಾತಿಗೆ ಮರುಳಾದ ಯುವಕ ಮಾನಸಿಕ ಹಿಂಸೆ ಅನುಭವಿಸಿದ್ದು ಮಾತ್ರವಲ್ಲ, ಬರೋಬ್ಬರಿ 39 ಲಕ್ಷ ಹಣ ಕಳೆದುಕೊಂಡಿದ್ದಾನೆ.

ಏನಿದು ಪ್ರಕರಣ?: ಸಿಂದಗಿ ತಾಲೂಕಿನ ಬಗಲೂರ ಗ್ರಾಮದ ನಿವಾಸಿ ಪರಮೇಶ್ವರ ನಾನಾಗೌಡ ಹಿಪ್ಪರಗಿ ಎಂಬಾತ ಮಂಜುಳಾ ಕೆ.ಆರ್​. ಎಂಬ ಫೇಸ್​ಬುಕ್​ ಖಾತೆಯಿಂದ ಬಂದ ರಿಕ್ವೆಸ್ಟ್ ಸ್ವೀಕರಿಸಿದ್ದ. ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಆದಿತ್ಯ ನಗರದ ಆದಿಬಟ್ಟಲ ಗ್ರಾಮದಲ್ಲಿರುವ ಟಾಟಾ ಕಂಪನಿಯಲ್ಲಿ ಪರಮೇಶ್ವರ ಕೆಲಸ ಮಾಡುತ್ತಿದ್ದ. ಮಹಿಳೆಯು ತನಗಿನ್ನೂ ಮದುವೆ ಆಗಿಲ್ಲ. ಐಎಎಸ್​ ಪಾಸ್​ ಆಗಿದೆ, ಶೀಘ್ರವೇ ಜಿಲ್ಲಾಧಿಕಾರಿ ಆಗುವೆ ಎಂದು ಹೇಳಿದ್ದಳು. ವಾಸ್ತವದಲ್ಲಿ ಈಕೆ ಐಎಎಸ್​ ಪಾಸ್​ ಮಾಡಿಲ್ಲ. ಈಗಾಗಲೇ ಬೇರೊಬ್ಬನ ಜತೆ ಮದ್ವೆ ಕೂಡ ಆಗಿದೆ. ಅಷ್ಟೇ ಅಲ್ಲ, ಫೇಸ್​ಬುಕ್​ನಲ್ಲಿ ಫೋಟೋ ಕೂಡ ಈಕೆಯದ್ದಲ್ಲ. ಇದ್ಯಾವುದರ ಪರಿವೇ ಇಲ್ಲದ ಪರಮೇಶ್ವರ, ಮಹಿಳೆಯ ಮಾತಿಗೆ ಬೆರಗಾಗಿದ್ದ.

ಇದನ್ನೇ ಬಂಡವಾಳ ಮಾಡಿಕೊಂಡ ಮಹಿಳೆ, ನಾನು ನಿನ್ನನ್ನು ಪ್ರೀತಿಸುತ್ತಿವೆ. ಮದ್ವೆ ಕೂಡ ಆಗುವೆ. ನಾನು ಡಿಸಿ ಆಗುತ್ತೇನೆ. ಅದಕ್ಕಾಗಿ ಹಣ ಬೇಕಿದೆ ಎಂದು ನಂಬಿಸಿದ್ದಳು. ಇದನ್ನು ನಂಬಿದ ಪರಮೇಶ್ವರ, ಮಹಿಳೆ ಕೇಳಿದಾಗಲೆಲ್ಲ ಹಂತ ಹಂತವಾಗಿ ಒಟ್ಟು 39,04,870 ರೂಪಾಯಿ ಸಂದಾಯ ಮಾಡಿದ್ದ. ಕೊನೆಗೆ ತಾನು ಮೋಸ ಹೋಗಿರುವುದು ಪರಮೇಶ್ವರಗೆ ಅರಿವಾಗಿದೆ. ತುಂಬಾ ನೊಂದ ಪರಮೇಶ್ವರ, ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾನೆ.

ಪರಮೇಶ್ವರ ಕೊಟ್ಟ ದೂರಿನ ಮೇರೆಗೆ ಕಾಯಾಚರಣೆ ನಡೆಸಿದ ಪೊಲೀಸರು, ಮಹಿಳೆಯನ್ನ ಬಂಧಿಸಿದ್ದಾರೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ದಾಸರಹಳ್ಳಿ ಗ್ರಾಮದ ಮಂಜುಳಾ ಕೆ.ಆರ್​. ಬಂಧಿತ ಆರೋಪಿ. ಈಕೆಯಿಂದ ಒಂದು ಕಾರು, ಮೊಬೈಲ್​, ನಗದು ಸೇರಿ ಒಟ್ಟು 6,64,000 ರೂ. ಮೌಲ್ಯದ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ ಎಂದು ವಿಜಯಪುರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎಚ್​.ಡಿ. ಆನಂದಕುಮಾರ್​ ಸುದ್ದಿಗಾರರಿಗೆ ತಿಳಿಸಿದರು.

ವಿಜಯಪುರ ನಗರದ ಸಿಇಎನ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಎಸ್​ಪಿ ಶಂಕರ ಮಾರಿಹಾಳ ಮಾರ್ಗದರ್ಶನ ಹಾಗೂ ಸಿಪಿಐ ರಮೇಶ ಅವಜಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಪ್ರಕರಣ ಬೆನ್ನಟ್ಟಿದ್ದ ರಮೇಶ ಅವಜಿ ಟೆಕ್ನಿಕಲ್​ ಎವಿಡೆನ್ಸ್​ಗಳಾದ ಮೊಬೈಲ್​ ಸಿಡಿಆರ್​ ಲೋಕೇಶನ್​ ಹಾಗೂ ಮೊಬೈಲ್​ ಸಿಎಂ ಸಬ್​ಕೆಬರ್​ ಹಾಗೂ ಬ್ಯಾಂಕ್​ ಕೆವೈಸಿ ಮಾಹಿತಿ ಕಲೆ ಹಾಕಿ ಮಂಜುಳಾ ಪತ್ತೆಗೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ದಾಸರಳ್ಳಿಗೆ ದೌಡಾಯಿಸಿತ್ತು. ಅಲ್ಲಿ ಮಂಜುಳಾ ತನ್ನ ಗಂಡನೊಂದಿಗೆ ವಾಸವಾಗಿದ್ದು, ಈ ಕೃತ್ಯದಲ್ಲಿ ಗಂಡ-ಹೆಂಡತಿ ಇಬ್ಬರೂ ಭಾಗಿಯಾಗಿರುವುದು ಕಂಡು ಬಂದಿದೆ ಎಂದು ಎಸ್​ಪಿ ವಿವರಿಸಿದರು.

ಐಷಾರಾಮಿ ಜೀವನ: ಪರಮೇಶ್ವರಗೆ ವಂಚಿಸಿದ ಹಣದಲ್ಲಿಯೇ ಮಂಜುಳಾ 100 ಗ್ರಾಂ ಚಿನ್ನಾಭರಣ, ಒಂದು ಸೆಕೆಂಡ್​ ಹ್ಯಾಂಡ್​ ಹುಂಡೈ ಕಂಪನಿಯ ಸ್ಯಾಂಟ್ರೋ ಕಾರು ಹಾಗೂ ಬಜಾಜ್​ ಸಿಟಿ ಹಂಡ್ರೆಡ್​ ಮೋಟರ್​ ಸೈಕಲ್​ ಖರೀದಿಸಿದ್ದಾಳೆ. ದಾಸರಹಳ್ಳಿಯಲ್ಲಿ ಮನೆ ನಿರ್ಮಿಸಿಕೊಂಡು ತನ್ನ ಗಂಡನ ಜತೆ ಸ್ವಾಮಿ ಫೈನಾನ್ಸ್​ ಹೆಸರಿನಲ್ಲಿ ಫೈನಾನ್ಸ್​ ಕಂಪನಿ ತೆರೆದು ಸಾರ್ವಜನಿಕರಿಗೆ ಸಾಲ ನೀಡಿದ್ದಾಳೆ. ವಿಚಾರಣೆ ವೇಳೆ ಮಂಜುಳಾ ಹಾಗೂ ಆಕೆಯ ಗಂಡ ಸ್ವಾಮಿ ತಪ್ಪೊಪ್ಪಿಕೊಂಡಿದ್ದು, ಅವರ ಫೆಡರಲ್​ ಬ್ಯಾಂಕ್​ ಖಾತೆಯನ್ನು ಮುಟ್ಟುಗೋಲು ಹಾಕಲಾಗಿದೆ. ಅದರಲ್ಲಿ 6 ಲಕ್ಷ ರೂ. ವಶಕ್ಕೆ ಪಡೆದಿರುವುದಾಗಿ ಎಸ್​ಪಿ ತಿಳಿಸಿದರು. ಎಎಸ್​ಪಿ ಶಂಕರ ಮಾರಿಹಾಳ, ಸಿಪಿಐ ರಮೇಶ ಅವಜಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ