ಹುಬ್ಬಳ್ಳಿ: ಇತ್ತೀಚೆಗೆ ಯುವ ಪೀಳಿಗೆಯವರೇ ಹೆಚ್ಚಿನ ಸಂಖ್ಯೆಯಲ್ಲಿ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ. ಆದರೆ ಇಲ್ಲೊಬ್ಬ ಹುಡುಗ ಇನ್ನೂ ಯೌವ್ವನಕ್ಕೆ ಕಾಲಿಡುವ ಮೊದಲೇ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾನೆ.
ಕೇವಲ 13 ವರ್ಷ ವಯಸ್ಸಿನ ಬಾಲಕನೊಬ್ಬ ತಾನು ಕಲಿಯುತ್ತಿದ್ದ ಶಾಲೆಯಲ್ಲೇ ಹೃದಯಾಘಾತವಾಗಿ ಕುಸಿದು ಬಿದ್ದು ಸಾವನ್ನಪ್ಪಿರುವ ಈ ಘಟನೆ ಸಮೀಪದ ಕಲಘಟಗಿಯಲ್ಲಿ ನಡೆದಿದೆ. ಮಕ್ತುಮ್ ಮಹ್ಮದ್‌ರಫಿ ಮನಿಯಾರ್ (13) ಮೃತಪಟ್ಟ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ. ಧಾರವಾಡ ಜಿಲ್ಲೆ ಕಲಘಟಗಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ಸಂಭವಿಸಿದೆ.
ಈ ಬಾಲಕ ಆರನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಶಾಲೆಯಲ್ಲಿ ಪಾಠ ನಡೆಯುತ್ತಿದ್ದಾಗ ಎಲ್ಲರ ಎದುರೇ ಏಕಾಏಕಿ ಕುಸಿದುಬಿದ್ದಿದ್ದ. ಆತಯನ್ನು ಕೂಡಲೇ ಕಲಘಟಗಿ ತಾಲ್ಲೂಕು ಆಸ್ಪತ್ರೆಗೆ ಶಿಕ್ಷಕರು ದಾಖಲಿಸಿದ್ದರು. ಆದರೆ ಚೇತರಿಸಿಕೊಳ್ಳದೇ ಆತ ಕೊನೆಯುಸಿರೆಳೆದಿದ್ದಾನೆ.