ಗದಗ: ‘ಗಡಿ ವಿಷಯವಾಗಿ ಮಹಾರಾಷ್ಟ್ರ ಸರ್ಕಾರ ಕ್ಯಾತೆ ತೆಗೆದಿದೆ. ಅಲ್ಲಿನ ಕೆಲವು ರಾಜಕಾರಣಿಗಳು ಈ ವಿಷಯವನ್ನು ಅನವಶ್ಯಕವಾಗಿ ಎತ್ತಿದ್ದಾರೆ. ಯಥಾ ಸ್ಥಿತಿ ಕಾಯ್ದುಕೊಳ್ಳುವುದು ಇಲ್ಲವೇ ಮಹಾಜನ ವರದಿ ಜಾರಿಗೆ ಆಗ್ರಹಿಸಬೇಕು ಎಂಬುದು ರಾಜ್ಯದ ನಿಲುವಾಗಿದೆ’ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿ ಎಚ್.ಕೆ.ಪಾಟೀಲ ಒತ್ತಾಯಿಸಿದರು.
ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ಈಗಾಗಲೇ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಈ ಕುರಿತು ಸರ್ನಾನುಮತದ ನಿರ್ಣಯ ಮಾಡಿದ್ದೇವೆ. ಯಾವುದೇ ರಾಜಕೀಯ ಮಾತುಕತೆ ಸಾಧ್ಯವಿಲ್ಲ. ಆದರೆ, ಮುಖ್ಯಮಂತ್ರಿ ಬೊಮ್ಮಾಯಿ ಅವರು ಗಡಿ ವಿವಾದದ ಬಗ್ಗೆ ಪ್ರಸ್ತಾಪ ಮಾಡುತ್ತಾರೆ. ಈ ವಿಚಾರವಾಗಿ ಯಾರೇ ಆದರೂ ಅಪಸ್ವರ, ಲಘು ಹೇಳಿಕೆ ನೀಡುವುದು ದುರ್ದೈವದ ಸಂಗತಿ’ ಎಂದು ಹೇಳಿದರು.
‘ಕರ್ನಾಟಕ ರಾಜ್ಯಪಾಲರು ಮಹಾರಾಷ್ಟ್ರ ರಾಜ್ಯಪಾಲರ ಜತೆಗೆ ಮಾತನಾಡಿದ್ದಾರೆ. ಸಭೆಯಲ್ಲಿ ರಾಜ್ಯಪಾಲರು ಏನು ಮಾತನಾಡಿದರು ಎಂಬ ವಿವರಗಳನ್ನು ಸಾರ್ವಜನಿಕರು ಮುಂದೆ ತೆರೆದಿಡಬೇಕು’ ಎಂದು ಆಗ್ರಹಿಸಿದರು.
‘ವಿವಾದ ಇರುವ ಸಂದರ್ಭದಲ್ಲಿ ಯಾರಿಗೆ ಅನುಕೂಲ ಮಾಡಬೇಕು, ಏನು ಮಾಡಬೇಕು ಎಂಬುದನ್ನು ಸರ್ಕಾರವೇ ನಿರ್ಧರಿಸಬೇಕು. ಅದಕ್ಕೆ ರಾಜ್ಯಪಾಲರು ಯಾಕೆ ಬೇಕು’ ಎಂದು ಪ್ರಶ್ನಿಸಿದರು.
‘ಗಡಿ ಸಮಸ್ಯೆಗಳನ್ನು ನೋಡಿಕೊಳ್ಳಲು ತಕ್ಷಣವೇ ಸಿಎಂ ಬೊಮ್ಮಾಯಿ ಅವರು ಗಡಿ ಉಸ್ತುವಾರಿ ಸಚಿವರನ್ನು ನೇಮಿಸಬೇಕು’ ಎಂದು ಆಗ್ರಹಿಸಿದರು.