ದೇಶಕ್ಕೆ ಅನ್ನಹಾಕುವ ಅನ್ನದಾತನ ಕಷ್ಟ ಹೇಳ ತೀರದಾಗಿದೆ. ಕೃಷಿ ಕಾಯಕದಲ್ಲಿ ತನಗೆ ಸಾಥ್ ನೀಡುತ್ತಿದ್ದ ಸಾರಥಿಯ ಸಂಕಷ್ಟದಿಂದ ಕಣ್ಣೀರು ಹಾಕುವಂತಾಗಿದೆ. ರೈತ ಸಮುದಾಯದ ಜೀವನಾಡಿ ಜಾನುವಾರುಗಳಿಗೆ ಗಂಟು ಬಿದ್ದಿರುವ ಚರ್ಮ ಗಂಟು ರೋಗ ಧಾರವಾಡ ಜಿಲ್ಲೆಯಲ್ಲಿ ಉಲ್ಬಣಗೊಂಡಿದೆ. ಅಷ್ಟಕ್ಕೂ ಏನಿದು ಸಮಸ್ಯೆ ಅಂತೀರಾ ಈ ಸ್ಟೋರಿ ನೋಡಿ..
ಒಕ್ಕಲಿಗ ಒಕ್ಕಿದರೇ ಉಕ್ಕುವುದು ಜಗವೆಲ್ಲ. ಒಕ್ಕಲಿಗ ಒಕ್ಕದಿದ್ದರೇ ಬಿಕ್ಕುವುದು ಜಗವೆಲ್ಲ ಎಂಬುವಂತ ಮಾತು ಅಕ್ಷರಶಃ ಸತ್ಯ. ಆದರೆ ಈಗ ಒಕ್ಕುವ ರೈತನ ಜೀವನಾಡಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿವೆ. ಹೌದು..ಈ ರೋಗಕ್ಕೆ ಬಲಿಯಾದ ಜಾನುವಾರುಗಳ ಸಂಖ್ಯೆ 300 ಆಸುಪಾಸಿಗೆ ತಲುಪಿದೆ. ಪಶು ಸಂಗೋಪನೆ ಇಲಾಖೆ ಮಾಹಿತಿ ನೀಡಿದ ಪ್ರಕಾರ 228 ಗ್ರಾಮಗಳಲ್ಲಿ ಚರ್ಮಗಂಟು ರೋಗ ಉಲ್ಬಣಗೊಂಡಿದೆ. ಇದು ರೈತಾಪಿ ವರ್ಗದಲ್ಲಿ ಆತಂಕ ಸೃಷ್ಟಿ ಮಾಡಿದೆ. 14,334 ಜಾನುವಾರುಗಳಲ್ಲಿ ರೋಗ ಪತ್ತೆಯಾಗಿದ್ದು, 288 ಬಲಿಯಾಗಿದೆ. ಈ ನಿಟ್ಟಿನಲ್ಲಿ ರೈತರಲ್ಲಿ ಆತಂಕದ ಛಾಯೆ ಹುಟ್ಟಿಕೊಂಡಿದೆ.
ಇನ್ನೂ ಚರ್ಮ ಗಂಟು ರೋಗಕ್ಕೆ 288 ಜಾನುವಾರುಗಳು ಮೃತಪಟ್ಟಿದ್ದು, ಈ ಪೈಕಿ ಹುಬ್ಬಳ್ಳಿಯಲ್ಲಿಯೇ ಅಧಿಕ 79 ಜಾನುವಾರುಗಳು ಅಸುನೀಗಿವೆ. ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಕುಂದಗೋಳ ಹಾಗೂ ನವಲಗುಂದ ತಾಲೂಕಿನ 228 ಗ್ರಾಮಗಳ ವ್ಯಾಪ್ತಿಯ 4334 ಜಾನುವಾರುಗಳಲ್ಲಿ ಚರ್ಮ ಗಂಟು ರೋಗ ಕಂಡುಬಂದಿವೆ. ಈ ಪೈಕಿ ಈಗಾಗಲೇ 2879 ಜಾನುವಾರುಗಳು ರೋಗದಿಂದ ಗುಣಮುಖ ಹೊಂದಿವೆ. 1455 ಜಾನುವಾರುಗಳಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಹುಬ್ಬಳ್ಳಿ ಹಾಗೂ ನವಲಗುಂದ ತಾಲೂಕಿನಲ್ಲಿ ರೋಗ ಪತ್ತೆಯಾದ ಜಾನುವಾರುಗಳ ಸಂಖ್ಯೆ ಸಾವಿರ ಗಡಿ ದಾಟಿದೆ. ಇನ್ನೂ ಧಾರವಾಡ ಜಿಲ್ಲೆಯಲ್ಲಿ 600 ಜನ ವೈದ್ಯರು ಹಾಗೂ ಸಿಬ್ಬಂದಿ ಅವಶ್ಯಕತೆ ಇದೆ. ಈ ಪೈಕಿ ಶೇ.50 ಹುದ್ದೆಗಳು ಖಾಲಿಯಿವೆ. ಜಿಲ್ಲೆಯಲ್ಲಿ 108 ಕ್ಕೂ ಹೆಚ್ಚು ಪಶು ಆಸ್ಪತ್ರೆಗಳಿವೆ. 78 ವೈದ್ಯರ ಅನುಮೋದನೆಗೊಂಡ ಹುದ್ದೆಗಳಿವೆ.ಆದ್ರೆ ಕೇವಲ 48 ವೈದ್ಯರು ಮಾತ್ರ ಇದ್ದಾರೆ. ಇದರಿಂದ ಸರಿಯಾದ ಚಿಕಿತ್ಸೆ ಸಿಗದೇ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.