ಬೆಳಗಾವಿ: ಗಡಿ ವಿವಾದ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಅಂತಿಮ ಹಂತದ ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಗಡಿ ಸಲಹಾ ಸಮಿತಿ ಅಧ್ಯಕ್ಷರನ್ನಾಗಿ ಸಂಸದ ಧೈರ್ಯಶೀಲ ಮಾನೆ ಅವರನ್ನು ಆಯ್ಕೆ ಮಾಡಿದೆ.
ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಇಚಲಕರಂಜಿ ಸಂಸದ ಧೈರ್ಯಶೀಲ ಮಾನೆ ಅವರನ್ನು ಅಧ್ಯಕ್ಷರಾಗಿ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ನಂತರ ಮಾನೆ ಅವರಿಗೆ ಮುಖ್ಯಮಂತ್ರಿಗಳು ಮುಂಬೈನ ತಮ್ಮ ಸಹ್ಯಾದ್ರಿ ಅತಿಥಿ ಗೃಹದಲ್ಲಿ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.
ಈ ಹಿಂದೆ ಹಲವು ವರ್ಷಗಳ ಕಾಲ ದಿ.ಎನ್.ಡಿ. ಪಾಟೀಲ ಗಡಿ ಸಲಹಾ ಸಮಿತಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು. ನಂತರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಆಡಳಿತದ ಮಹಾ ವಿಕಾಸ ಅಘಾಡಿ ಸರ್ಕಾರದಲ್ಲಿ ಜಯಂತ ಪಾಟೀಲ ಅಧ್ಯಕ್ಷರಾಗಿದ್ದರು. ಈ ಸರ್ಕಾರ ಪತನದ ನಂತರ ಸ್ಥಾನ ತೆರವಾಗಿತ್ತು. ಈಗ ನೂತನ ಸರ್ಕಾರ ಧೈರ್ಯಶೀಲ ಮಾನೆ ಅವರನ್ನು ಆಯ್ಕೆ ಮಾಡಿದೆ.