ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್‍ಗಳಿಗೆ ಮಸಿ ಬಳಿದು, ಕಲ್ಲು ತೂರಾಟ ಮಾಡಿರುವ ಮಹಾ ಪುಂಡರ ವಿರುದ್ಧ ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಪ್ರತಿಭಟನೆ ನಡೆಸಲಾಯಿತು.
ಮಂಗಳವಾರ ಬೆಳಗಾವಿಯ ಚನ್ನಮ್ಮಾಜಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಪದಾಧಿಕಾರಿಗಳು ಮಹಾರಾಷ್ಟ್ರ ಸಿಎಂ, ಡಿಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅದೇ ರೀತಿ ಕೈಯಲ್ಲಿ ಬೆಳಗಾವಿ ಶಾಸಕರು ಕಾಣೆಯಾಗಿದ್ದಾರೆ ಎಂಬ ಬರಹದ ಫಲಕಗಳನ್ನು ಹಿಡಿದು ತಮ್ಮ ಅಸಮಾಧಾನ ಹೊರ ಹಾಕಿದರು.
ಜಿಲ್ಲಾಧ್ಯಕ್ಷ ಈಶ್ವರಗೌಡ ಪಾಟೀಲ್ ಮಾತನಾಡಿ ಕನ್ನಡಿಗರನ್ನು ಪದೇ ಪದೇ ಕೆರಳಿಸುತ್ತಿದ್ದಾರೆ. ನಮ್ಮನ್ನು ಕೈಲಾಗದವರು ಎಂದೂ ತಿಳಿದುಕೊಂಡಿದ್ದಾರೆ. ಆದರೆ ನಮ್ಮ ಬಸ್‍ಗಳಿಗೆ ಮಸಿ ಬಳಿಯುವುದು, ಕಲ್ಲು ಎಸೆಯುವುದು ಹೆಣ್ಣು ಮಕ್ಕಳ ಕೆಲಸ. ಎಂದಿಗೂ ನಮ್ಮ ಬೆಳಗಾವಿಯ ಒಂದಿಂಚು ಜಾಗವನ್ನು ಮಹಾರಾಷ್ಟ್ರಕ್ಕೆ ಬಿಟ್ಟು ಕೊಡುವುದಿಲ್ಲ. ಅದೇ ರೀತಿ ರಾಜ್ಯದಲ್ಲಿ ಎಂಇಎಸ್, ಶಿವಸೇನೆ ಸಂಘಟನೆಗಳನ್ನು ಕರ್ನಾಟಕ ಸರ್ಕಾರ ನಿಷೇಧಿಸಬೇಕು. ಬೆಳಗಾವಿಯ ಯಾವೊಬ್ಬ ಶಾಸಕರು ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಇದೇ ರೀತಿ ನೀವು ಕನ್ನಡ ನಾಡಿನ ಬಗ್ಗೆ ಮೌನ ವಹಿಸಿದರೆ ಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.