ಬೆಳಗಾವಿಯಲ್ಲಿ ರಿಂಗ್‍ರೋಡ್ ನಿರ್ಮಾಣದ ವಿರುದ್ಧ ಅನ್ನದಾತರು ಸಿಡಿದೆದ್ದಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮ ಫಲವತ್ತಾದ ಭೂಮಿ ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಹಿಡಿದು ಇಂದು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.
ಬೆಳಗಾವಿ ಸುತ್ತಮುತ್ತಲೂ ಫಲವತ್ತಾದ ಭೂಮಿ ಇದೆ. ತುಂಡು ಭೂಮಿಗಳು ಇರುವ ಹಿನ್ನೆಲೆ ಒಂದು ಎಕರೆ, ಎರಡು ಎಕರೆ, ಅರ್ಧ ಎಕರೆಯಲ್ಲಿಯೇ ವರ್ಷಕ್ಕೆ ಮೂರು ಬೆಳೆ ಬೆಳೆದು ತಮ್ಮ ಕುಟುಂಬವನ್ನು ಇಲ್ಲಿನ ರೈತರು ನಿರ್ವಹಿಸುತ್ತಿದ್ದಾರೆ. ಈಗಾಗಲೇ ಸುವರ್ಣಸೌಧ ಸೇರಿ ಇನ್ನಿತರ ಸಂಬಂಧ ಸಾಕಷ್ಟು ಭೂಮಿಯನ್ನು ಈ ರೈತರು ಕಳೆದುಕೊಂಡಿದ್ದಾರೆ. ಇದೀಗ ರಿಂಗ್ ರೋಡ್ ನಿರ್ಮಾಣಕ್ಕಾಗಿ ಮತ್ತೆ ರೈತರ ಭೂಮಿ ಸ್ವಾದೀನಕ್ಕೆ ಸರ್ಕಾರಕ್ಕೆ ಮುಂದಾಗಿರೋದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಸೋಮವಾರ ಎಂಇಎಸ್ ನೇತೃತ್ವದಲ್ಲಿ ವಕೀಲರ ಸಂಘ, ಶ್ರೀರಾಮಸೇನಾ ಹಿಂದೂಸ್ತಾನ, ರೈತ ಸಂಘಟನೆಗಳು ಸೇರಿ ಇನ್ನಿತರ ಸಂಘಟನೆಗಳು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು. ಧರ್ಮವೀರ ಸಂಭಾಜಿ ವೃತ್ತದಿಂದ ಆರಂಭವಾದ ಈ ರ್ಯಾಲಿಯು ಕಾಲೇಜು ರಸ್ತೆ, ರಾಣಿ ಚನ್ನಮ್ಮ ವೃತ್ತ ಮಾರ್ಗವಾಗಿ ಡಿಸಿ ಕಚೇರಿವರೆಗೂ ನಡೆಯಿತು. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ, ರಸ್ತೆಯಲ್ಲಿ ಬಾರುಕೋಲು ಹೊಡೆದು ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.