ಬೆಂಗಳೂರು: ಟಿಕೆಟ್ ಹಂಚಿಕೆ ವಿಚಾರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಧ್ಯೆ ಭಿನ್ನಮತ ತಾರಕಕ್ಕೆ ಏರಿದ್ದು, ನಿನ್ನೆ ಆಯೋಜಿಸಿದ್ದ ಸಭೆಗೆ ಸಿದ್ದರಾಮಯ್ಯ ಗೈರಾಗಿರುವುದು ಹೈಕಮಾಂಡ್ ಅಸಮಾಧಾನಕ್ಕೆ ಕಾರಣವಾಗಿದೆ.
ಅರ್ಜಿ ಸಲ್ಲಿಸಿದ್ದ ಟಿಕೆಟ್ ಅಕಾಂಕ್ಷಿಗಳು ಹಾಗೂ ಬೂತ್ ಕಮಿಟಿ ಅಧ್ಯಕ್ಷರ ವರದಿ ಬಗ್ಗೆ ವಿಶ್ಲೇಷಣೆ ನಡೆಸಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ನೇತೃತ್ವದಲ್ಲಿ ಶುಕ್ರವಾರ ಸಭೆ ಆಯೋಜಿಸಲಾಗಿತ್ತು. ಆದರೆ ಈ ಸಭೆಗೆ ಸಿದ್ದರಾಮಯ್ಯ ಗೈರಾಗಿದ್ದು ಮಾತ್ರವಲ್ಲ, ತಮ್ಮ ಆಪ್ತ ನಾಯಕರೂ ದೂರ ಉಳಿದು ಕೊಳ್ಳುವಂತೆ ನೋಡಿಕೊಂಡಿದ್ದಾರೆ. ಖುದ್ದು ಸುರ್ಜೇವಾಲಾ ಕರೆ ಮಾಡಿ ಸಭೆಗೆ ಕರೆದರೂ ವಿಶ್ರಾಂತಿಯ ನೆಪವೊಡ್ಡಿ ದೂರ ಉಳಿದಿದ್ದಾರೆ. ಇದು ವರಿಷ್ಠರ ಬೇಸರಕ್ಕೆ ಕಾರಣವಾಗಿದೆ.
ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಬೂತ್ ಕಮಿಟಿ ಅಧ್ಯಕ್ಷರ ವರದಿಯನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಡಿ.ಕೆ.ಶಿವಕುಮಾರ್ ಈಗಾಗಲೇ ಸೂಚನೆ ನೀಡಿದ್ದಾರೆ. ಆದರೆ ಹಲವು ಜಿಲ್ಲೆಗಳ ಮುಖಂಡರು ಈ ಸಂಬಂಧ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ವರದಿಗೆ ಮಹತ್ವ ಬೇಡ ಎಂಬುದು ಸಿದ್ದರಾಮಯ್ಯ ಅವರ ವಾದ. ಆದರೆ ಪಕ್ಷದ ಸಂಘಟನಾತ್ಮಕ ಚಟುವಟಿಕೆಗೆ ಬಲ ಬರಬೇಕಾದರೆ ಬೂತ್ ಕಮಿಟಿ ವರದಿಗೆ ಆದ್ಯತೆ ನೀಡಬೇಕು ಎಂಬುದು ಶಿವಕುಮಾರ್ ಪ್ರತಿಪಾದನೆ. ಇಷ್ಟೆಲ್ಲದರ ಮಧ್ಯೆ ಟಿಕೆಟ್ ಆಕಾಂಕ್ಷಿಗಳ ಸಭೆ ಕರೆದು ಶಿವಕುಮಾರ್ ವರಿಷ್ಠರ ಸಮ್ಮುಖದಲ್ಲೇ ಚರ್ಚೆಗೆ ಮುಂದಾಗಿರುವುದು ಸಿದ್ದರಾಮಯ್ಯ ಆಕ್ರೋಶಕ್ಕೆ ಕಾರಣವಾಗಿದೆ. ಒಂದು ಮೂಲಗಳ ಪ್ರಕಾರ ಈ ಸಭೆ ನಡೆಸುವ ಅಗತ್ಯವೇ ಇಲ್ಲ ಎಂದು ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಗೆ ಹೇಳಿದ್ದರು ಎಂದು ತಿಳಿದು ಬಂದಿದೆ.