ಕಾಗವಾಡ ತಾಲೂಕಿನ ಏತ ನೀರಾವರಿ ಯೋಜನೆಗಳ ಮೇಲೆ ಅವಲಂಬಿತವಾಗಿರುವ ರೈತರು ಈ ಮೊದಲಿನಂತೆ ನಿರಂತರವಾಗಿ 7 ಗಂಟೆ ವಿದ್ಯುತ್ಪೂ ರೈಸುವಂತೆ ಶಾಸಕ ಶ್ರೀಮಂತ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.
ಶುಕ್ರವಾರ ಕಾಗವಾಡ ಸರ್ಕಾರಿ ವಿಶ್ರಾಂತಿ ಗೃಹದಲ್ಲಿ ಈ ಸಂಬಂಧ ರೈತರು ಶಾಸಕರನ್ನು ಭೇಟಿಯಾದರು. ಈ ವೇಳೆ ಶ್ರೀಮಂತ ಪಾಟೀಲ್ ಅವರು ನೇರವಾಗಿ ಹುಬ್ಬಳ್ಳಿಯ ಹೆಸ್ಕಾಂ ಇಲಾಖೆಯ ಎಂಡಿ ಡಿ.ಭಾರತಿ ಅವರೊಂದಿಗೆ ವಿಡಿಯೋ ಕಾಲ್ ಮುಖಾಂತರ ಇಲ್ಲಿಯ ರೈತರ ಸಮಸ್ಯೆಗಳು ಹಾಗೂ ಅವರ ಬೇಡಿಕೆಗಳ ಬಗ್ಗೆ ಚರ್ಚಿಸಿದರು. ರೈತರನ್ನು ರೊಚ್ಚಿಗೆಬ್ಬಿಸಬೇಡಿ. ಅಸಮರ್ಪಕವಾಗಿ ವಿದ್ಯುತ್ ಪೂರೈಕೆ ಆಗುತ್ತಿರುವುದರಿಂದ ರೈತರ ಬೆಳೆಗಳು ಕಮರಿ ಹೋಗುತ್ತಿವೆ. ಅವರು ರೊಚ್ಚಿಗೆದ್ದು ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಅವರ ಸಮಸ್ಯೆಗೆ ಪರಿಹಾರ ನೀಡಲು ನೀವು ಕೂಡಲೇ ನಿರ್ಣಯ ಕೈಗೊಳ್ಳಲಿ ಈ ಮೊದಲಿನಂತೆ ಸಿಂಗಲ್ ಫೇಸ್ ಕನೆಕ್ಷನ್ ನೀಡಿರಿ ಎಂದರು.
ಬಳಿಕ ಶಾಸಕ ಶ್ರೀಮಂತ ಪಾಟೀಲ್ ಅವರು ರಾಜ್ಯದ ಇಂಧನ ಖಾತೆ ಸಚಿವ ಸುನಿಲ್ ಕುಮಾರ್ ಇವರೊಂದಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿ ಇಲ್ಲಿಯ ರೈತರ ಸಮಸ್ಯೆ ಬಗ್ಗೆ ಚರ್ಚಿಸಿದರು. ಈ ಸಮಸ್ಯೆಗಳಿಗೆ ಬರುವ ಎರಡು ದಿನಗಳಲ್ಲಿ ಸ್ಪಂದಿಸದೆ ಹೋದರೆ ಆ ರೈತರೊಂದಿಗೆ ನಾನು ಹೋರಾಟಕ್ಕೆ ಇಳಿಯಬೇಕಾಗುತ್ತದೆ ಸಚಿವರಿಗೆ ಶಾಸಕರು ಎಚ್ಚರಿಕೆ ನೀಡಿದರು.
ಶಾಸಕರೊಂದಿಗೆ ತಹಶೀಲ್ದಾರ್ ರಾಜೇಶ್ ಬುರ್ಲಿ ಹಾಗೂ ಕಾಗವಾಡ ತಾಲೂಕಿನ ಬೇರೆ ಬೇರೆ ಗ್ರಾಮಗಳಿಂದ ಆಗಮಿಸಿದ ರೈತರು ಈ ವೇಳೆ ಉಪಸ್ಥಿತರಿದ್ದರು.