ಬೆಂಗಳೂರು: ಬೆಳಗಾವಿಯಲ್ಲಿ ಬೃಹತ್ ಆಟೋಮೊಬೈಲ್ ಉದ್ಯಮ ಸ್ಥಾಪನೆಗೆ ಉತ್ತೇಜನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಳಗಾವಿಯ ಅಭಿವೃದ್ಧಿ ಕುರಿತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹಾಗೂ ಶಾಸಕ ಅಭಯ್ ಪಾಟೀಲ್ ನೇತೃತ್ವದಲ್ಲಿ ಅಲ್ಲಿನ ವಾಣಿಜ್ಯೋದ್ಯಮಿಗಳ ನಿಯೋಗದೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿಯವರು, ರಾಜ್ಯದ ಆರ್ಥಿಕ ಬೆಳವಣಿಗೆ ಹಾಗೂ ಕೈಗಾರಿಕಾ ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಮಹತ್ವದ ಜಿಲ್ಲೆಯಾಗಿದೆ.
ಈ ಹಿನ್ನೆಲೆಯಲ್ಲಿ ಬೃಹತ್ ಉದ್ಯಮ ಸ್ಥಾಪನೆಯಿಂದ ಕೈಗಾರಿಕಾ ಅಭಿವೃದ್ಧಿ ಇನ್ನಷ್ಟು ವೇಗವಾಗಿ ಆಗಲಿದೆ ಎಂದು ಹೇಳಿದರು.
ಬೆಳಗಾವಿಯಲ್ಲಿ ಫೌಂಡ್ರಿ ಮತ್ತು ಹೈಡ್ರಾಲಿಕ್ಸ್ ಉದ್ಯಮಗಳಿಗೆ ಉತ್ತೇಜನ ನೀಡಲು ಫೌಂಡ್ರಿ ಪಾರ್ಕ್ ಸ್ಥಾಪಿಸುವಂತೆ ನಿಯೋಗವು ಮಾಡಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಭೂಮಿ ಗುರುತಿಸಿ, ಸ್ವಾಧೀನಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಇದಲ್ಲದೆ ಎಂಎಸ್‌ಎಂಇಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ವಿಧಿಸುವ ಶುಲ್ಕ ರಾಜ್ಯದಲ್ಲಿ ಕಡಿಮೆ ಮಾಡುವ ಬಗ್ಗೆ ಪರಿಶೀಲಿಸುವಂತೆ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಇದರೊಂದಿಗೆ ಬೆಳಗಾವಿ ಜಿಲ್ಲೆಯಲ್ಲಿ 100 ಹಾಸಿಗೆ ಸಾಮರ್ಥ್ಯದ ಇಎಸ್‌ಐಸಿ ಆಸ್ಪತ್ರೆ ಸ್ಥಾಪಿಸುವ ಕುರಿತಂತೆ ಕೇಂದ್ರ ಸರಕಾರದೊಂದಿಗೆ ಮಾತುಕತೆ ನಡೆಸುವುದಾಗಿಯೂ ತಿಳಿಸಿದರು.
ಮುಂಬಯಿ-ಚೆನ್ನೈ ಕಾರಿಡಾರ್‌ನಲ್ಲಿ ಬೆಳಗಾವಿ ಜಿಲ್ಲೆಯಲ್ಲಿಯೂ ಕೈಗಾರಿಕಾ ಟೌನ್‌ಶಿಪ್ ರಚಿಸಲಾಗುವುದು. ಇದರ ಸದುಪಯೋಗವನ್ನು ಉದ್ಯಮಿಗಳು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬೆಳಗಾವಿಯಲ್ಲಿ ಇಂಟೆಗ್ರೇಟೆಡ್ ಟೆಕ್ಸ್‌ಟೈಲ್ ಉದ್ಯಮ ಸ್ಥಾಪಿಸಲು ಮುಂದೆ ಬರುವಂತೆ ಸಲಹೆ ನೀಡಿದ ಮುಖ್ಯಮಂತ್ರಿಗಳು, ಬೆಳಗಾವಿಯ ಕೈಗಾರಿಕೋದ್ಯಮಗಳ ಬೆಳವಣಿಗೆ ಕುರಿತಂತೆ ಬೆಳಗಾವಿಗೆ ಭೇಟಿ ನೀಡಿದಾಗ ಉದ್ಯಮಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಚರ್ಚಿಸುವುದಾಗಿ ಭರವಸೆ ನೀಡಿದರು.