ನಾಲ್ಕು ವರ್ಷಗಳಿಂದ ಮನೆಗಳ ಹಕ್ಕು ಪತ್ರ ವಿತರಿಸಲು ಓಡಾಡಿಸುತ್ತಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸ್ಲಂ ನಿವಾಸಿಗಳು ಪ್ರತಿಭಟನೆ ನಡೆಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಹೌದು ಹೀಗೆ ಪ್ರತಿಭಟನೆ ಮಾಡುತ್ತಿರುವವರು ಶ್ರೀನಗರ ಕೊಳಗೇರಿ ಪ್ರದೇಶದ ಸ್ಲಂ ಬೋರ್ಡ ನಿವಾಸಿಗಳು. 4 ವರ್ಷದ ಹಿಂದೆ ಸರ್ಕಾರದ ಮನೆಗಳಿಗಾಗಿ ಇವರೆಲ್ಲಾ ದುಡ್ಡು ತುಂಬಿದ್ದರು. ಆದರೆ ಇದುವರೆಗೂ ಇವರಿಗೆ ಮನೆ ಹಕ್ಕು ಪತ್ರ ನೀಡುತ್ತಿಲ್ಲ. ಇಂದು ಬನ್ನಿ, ನಾಳೆ ಬನ್ನಿ ಎಂದು ವಿನಾಕಾರಣ ಅಧಿಕಾರಿಗಳು ಓಡಾಡಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇನ್ನು ಗುರುವಾರ ನಿಮಗೆ ಹಕ್ಕು ಪತ್ರ ವಿತರಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ ಹಿನ್ನೆಲೆ ನಗರದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಗೆ ಸ್ಲಂ ನಿವಾಸಿಗಳು ಆಗಮಿಸಿದರು. ಇಂದು ಸಹಿ ಮಾಡಿ ಹೋಗಿ ನಾಳೆ ಹಕ್ಕು ಪತ್ರ ಕೊಡುತ್ತೇನೆ ಎಂದು ಹೇಳಿದ್ದಾರೆ. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಇವರು ಪ್ರತಿಭಟನೆ ನಡೆಸಿದರು. ಹಕ್ಕು ಪತ್ರ ವಿತರಿಸಲು ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ, ಹಕ್ಕು ಪತ್ರ ಸಿಗೋವರೆಗೂ ಇಲ್ಲಿಂದ ಹೋಗುವುದಿಲ್ಲ ಎಂದು ಎಚ್ಚರಿಸಿದರು.ಈ ವೇಳೆ ಮಾತನಾಡಿದ ಶ್ರೀನಗರ ಕೊಳಗೇರಿ ಪ್ರದೇಶದ ಸ್ಲಂ ಬೋರ್ಡ ನಿವಾಸಿಗಳು ನಾಲ್ಕು ವರ್ಷ ಆಯ್ತು ನಮಗೆ ಹಕ್ಕು ಪತ್ರ ನೀಡಿಲ್ಲ.
ಇವತ್ತು ಹಕ್ಕು ಪತ್ರ ನೀಡುತ್ತೇವೆ ಎಂದು ಹೇಳಿದ್ದರು. ಹೀಗಾಗಿ ಇಲ್ಲಿಗೆ ಬಂದಿದ್ದೇವು. ಆದರೆ ಸಹಿ ಮಾಡಿ ಹೋಗರಿ ನಾಳೆ ನಿಮಗೆ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಒಂದು ದಿನ ದುಡಿಯಲಿಲ್ಲ ಎಂದರೆ ನಮ್ಮ ಮನೆ ನಡೆಯೋದಿಲ್ಲ. ನಮಗೆ ಹಕ್ಕು ಪತ್ರ ನೀಡೋವರೆಗೂ ನಾವು ಇಲ್ಲಿಂದ ಕದಲುವುದಿಲ್ಲ. ನಮಗೆ ಆಗಿದ್ದ ತ್ರಾಸ ಯಾರು ಕೇಳುತ್ತಾರೆ..? ದುಡ್ಡು ತುಂಬಿ ಇಂದೇ ಕೊನೆಯ ಡೇಟ್ ಎಂದು ಹೇಳಿದರು. ಸಾಲ ಮಾಡಿ, ಬಡ್ಡಿ ಮೇಲೆ ರೊಕ್ಕ ತಂದು, ಮನ್ಯಾಗಿನ ಸಾಮಾನ, ಬಂಗಾರಿ ಮಾರಿ, ಮಕ್ಕಳನ್ನು ಶಾಲೆ ಕಳಿಸೋದು ಬಿಟ್ಟು ದುಡ್ಡು ತುಂಬಿದ್ದೇವೆ. ನಾಲ್ಕು ವರ್ಷದಿಂದ ನಾವು ರೊಕ್ಕ ತುಂಬಿಕೊಂಡು ಬಂದಿದ್ದೇವೆ. ಆದರೆ ನಮ್ಮ ಬಡವರ ಮೇಲೆ ಬಹಳಷ್ಟು ಅನ್ಯಾಯ ಆಗುತ್ತಿದೆ ಎಂದು ಕಿಡಿಕಾರಿದರು.