ನವದೆಹಲಿ: ಇನ್ನು ಮುಂದೆ ಎಲ್ಲ ಇ-ಕಾಮರ್ಸ್ ಕಂಪನಿಗಳು, ಪ್ರಯಾಣ- ಟಿಕೆಟಿಂಗ್ ಪೋರ್ಟಲ್‌ಗಳು ಮತ್ತು ಆನ್‌ಲೈನ್ ಫುಡ್ ಡೆಲಿವರಿ ಪ್ಲಾಟ್‌ಫಾರಂಗಳು ತಮ್ಮ ಉತ್ಪನ್ನಗಳು ಹಾಗೂ ಸೇವೆಗಳ ಕುರಿತಾದ ಎಲ್ಲ ಪಾವತಿಸಿದ ಅಥವಾ ಪ್ರಾಯೋಜಿತ ರಿವ್ಯೂ(ಪ್ರತಿಕ್ರಿಯೆ)ಗಳನ್ನು ಸ್ವಯಂಪ್ರೇರಿತವಾಗಿ ಬಹಿರಂಗಪಡಿಸಬೇಕು.
ಆನ್‌ಲೈನ್ ಪ್ರತಿಕ್ರಿಯೆಗಳಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ಜಾರಿ ಮಾಡಿರುವ ಹೊಸ ಮಾರ್ಗಸೂಚಿಯಲ್ಲಿ ಈ ವಿಚಾರವನ್ನು ಸ್ಪಷ್ಟಪಡಿಸಲಾಗಿದೆ.
ನ.25ರಿಂದಲೇ ಈ ನಿಯಮ ಜಾರಿಯಾಗಲಿದೆ. ಇಂಥ ಕಂಪನಿಗಳು “ಖರೀದಿಸಿದ’ ಅಥವಾ “ಇದೇ ಉದ್ದೇಶಕ್ಕೆಂದೇ ನಿಯೋಜಿಸಲ್ಪಟ್ಟ ವ್ಯಕ್ತಿಗಳಿಂದ ಬರೆಸಲ್ಪಟ್ಟ’ ಪ್ರತಿಕ್ರಿಯೆಗಳನ್ನು ಪ್ರಕಟಿಸುವಂತಿಲ್ಲ ಎಂದೂ ಸೂಚಿಸಲಾಗಿದೆ.
ಉತ್ಪನ್ನಗಳು ಮತ್ತು ಸೇವೆಗಳ ಕುರಿತು ನಕಲಿ, ಮೋಸದ ರಿವ್ಯೂಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಈ ನಿಯಮ ಅನುಷ್ಠಾನ ಮಾಡಿದೆ. ಒಂದು ವೇಳೆ ಇದನ್ನು ಪಾಲಿಸುವಲ್ಲಿ ಕಂಪನಿಗಳು ವಿಫಲವಾದರೆ, ಅದನ್ನು ನ್ಯಾಯಯುತವಲ್ಲದ ವ್ಯಾಪಾರ ಎಂದು ಪರಿಗಣಿಸಿ, ಗ್ರಾಹಕ ರಕ್ಷಣಾ ಕಾಯ್ದೆಯ ಅನ್ವಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಹೇಳಿದ್ದಾರೆ.