ಬೆಂಗಳೂರು: ಕನ್ನಡಿಗರು ಹಾಗೂ ಮರಾಠಿಗರು ಪರಸ್ಪರ ಸೌಹಾರ್ದದಿಂದ ಸಹಬಾಳ್ವೆ ನಡೆಸುತ್ತಿದ್ದಾರೆ. ಉಭಯ ರಾಜ್ಯಗಳ ಮಧ್ಯೆ ಕಿಡಿ ಹೊತ್ತಿಸುವ ಕೆಲಸ ಮಹಾರಾಷ್ಟ್ರ ಸರ್ಕಾರ ಮಾಡಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಡಕ್ ಸಲಹೆ ನೀಡಿದ್ದಾರೆ.
ಕಾವೇರಿ ನಿವಾಸದ ಬಳಿ ಸುದ್ದಿಗಾರರಿಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ಸ್ವಾತಂತ್ರ್ಯ ಚಳವಳಿ , ಕರ್ನಾಟಕ ಏಕೀಕರಣ, ಗೋವಾ ವಿಮೋಚನೆಗೆ ಹೋರಾಡಿದ ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ಮಾಸಾಶನ ನೀಡಲು ನಿರ್ಧರಿಸಿದ್ದು, ಕೂಡಲೇ ಅಗತ್ಯ ದಾಖಲೆಗಳನ್ನು ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಿಸಿದರು.
ಮಹಾರಾಷ್ಟ್ರ ದಲ್ಲಿರುವ ಕನ್ನಡಿಗರ ರಕ್ಷಣೆ, ಕನ್ನಡ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಅಲ್ಲಿರುವ ಜತ್ ತಾಲೂಕಿನ ಬರಪೀಡಿತ ಪ್ರದೇಶಕ್ಕೆ ಕುಡಿಯುವ ನೀರು ಪೂರೈಸುವ ಕೆಲಸ ಕರ್ನಾಟಕ ಸರ್ಕಾರದಿಂದ ಆಗಿತ್ತು. ಈ ಹಿನ್ನೆಲೆಯಲ್ಲಿ ಜತ್ ತಾಲೂಕಿನ ಎಲ್ಲ ಗ್ರಾ.ಪಂ.ಗಳು ಕರ್ನಾಟಕಕ್ಕೆ ಸೇರಿಸಬೇಕೆಂದು ಠರಾವು ಪಾಸು ಮಾಡಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಸಿಎಂ ಬೊಮ್ಮಾಯಿ ಎಚ್ಚರಿಸಿದರು.