ಬೆಂಗಳೂರು: ಹೋಲ್‌ಸೇಲ್ ದರದಲ್ಲಿ ಕೋಟ್ಯಂತರ ರೂ. ಮೌಲ್ಯದ ಬಟ್ಟೆಗಳನ್ನು ಖರೀದಿಸಿ ಪೋಸ್ಟ್ ಡೇಟೆಡ್ ಚೆಕ್ ನೀಡಿ ವಂಚಿಸುತ್ತಿದ್ದ ಇಬ್ಬರು ಅಂತರಾಜ್ಯ ವಂಚಕರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಭಾರತ ಮೂಲದ ಪದಮ್ ಸಿಂಗ್, ವಿಮಲ್ ಬಂಧಿತರು.
ಆರೋಪಿಗಳಿಂದ ೩೦ ಲಕ್ಷ ರೂ. ಮೌಲ್ಯದ ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
೨೦೨೧ ಮಾರ್ಚ್ ೬ ರಂದು ಜಯನಗರದ ಐಕಾನ್ ಫ್ಯಾಷನ್ ಗಾರ್ಮೆಂಟ್ಸ್‌ಗೆ ತೆರಳಿ ತಮ್ಮನ್ನು ಸಿದ್ಧಿ ವಿನಾಯಕ ಟ್ರೇಡರ್ಸ್ ಮಾಲೀಕರೆಂದು ಪರಿಚಯಿಸಿಕೊಂಡಿದ್ದರು. ಹೋಲ್ ಸೇಲ್ ದರದಲ್ಲಿ ೬.೨೩ ಲಕ್ಷ ರೂ. ಮೌಲ್ಯದ ಹೊಸ ಬಟ್ಟೆ ಖರೀದಿಸಿ ಅಂಗಡಿ ಮಾಲೀಕರಿಗೆ ಚೆಕ್ ಕೊಟ್ಟಿದ್ದರು. ಚೆಕ್ ಅನ್ನು ಬ್ಯಾಂಕಿಗೆ ಹಾಕಿದಾಗ ಸಹಿ ತಾಳೆಯಾಗುತ್ತಿಲ್ಲವೆಂದು ವಾಪಸ್ ಬಂದಿತ್ತು. ನಂತರ ಗಾರ್ಮೆಂಟ್ಸ್‌ನವರು ಆರೋಪಿಗಳ ಕಚೇರಿ ಬಳಿ ಹೋಗಿ ಅಕ್ಕ-ಪಕ್ಕದವರನ್ನು ವಿಚಾರಿಸಿದ್ದರು. ಆ ವೇಳೆ ಆರೋಪಿಗಳು ಇದೇ ರೀತಿ ಹಲವಾರು ಗಾರ್ಮೆಂಟ್ಸ್‌ಗಳಿಂದ ಕೋಟ್ಯಂತರ ರೂ. ಮೌಲ್ಯದ ಬಟ್ಟೆ ಖರೀಸಿದಿ ಪೋಸ್ಟ್ ಡೇಟೆಡ್ ಚೆಕ್ ನೀಡಿ ವಂಚಿಸಿರುವ ಸಂಗತಿ ಗಾರ್ಮೆಂಟ್ಸ್‌ನವರ ಗಮನಕ್ಕೆ ಬಂದಿತ್ತು.
ಕೂಡಲೇ ಜಯನಗರ ಠಾಣೆ ಪೊಲೀಸರಿಗೆ ಗಾರ್ಮೆಂಟ್ಸ್ ಮಾಲೀಕರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಒಂದೂವರೆ ವರ್ಷಗಳ ನಂತರ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಈ ಇಬ್ಬರು ಆರೋಪಿಗಳ ವಿರುದ್ಧ ದೆಹಲಿ, ಪುಣೆ, ಹಲಸೂರು ಗೇಟ್, ವಿಲ್ಸನ್ ಗಾರ್ಡನ್ ಠಾಣೆಗಳಲ್ಲಿ ಇದೇ ಮಾದರಿಯ ೬ ವಂಚನೆ ಪ್ರಕರಣಗಳು ದಾಖಲಾಗಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.