Breaking News

ಸುಪ್ರೀಂನಲ್ಲಿ ಬೆಳಗಾವಿ ಗಡಿ ವಿವಾದದ ಬಗ್ಗೆ ಹೋರಾಡಲು ಸರ್ವಸನ್ನದ್ಧ: ಬೊಮ್ಮಾಯಿ

Spread the love

ಬೆಂಗಳೂರು: ಸುಪ್ರೀಂಕೋರ್ಟ್‌ನಲ್ಲಿ ಬೆಳಗಾವಿ ಗಡಿ ವಿವಾದದ ಬಗ್ಗೆ ಹೋರಾಡಲು ರಾಜ್ಯ ಸರ್ಕಾರ ಸರ್ವಸನ್ನದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ನಾಳೆ (ನ.23) ಸುಪ್ರಿಂಕೋರ್ಟ್‌ನಲ್ಲಿ ಬೆಳಗಾವಿ ಗಡಿ ವಿವಾದ 18 ವರ್ಷಗಳ ಬಳಿಕ ವಿಚಾರಣೆಗೆ ಬರುವುದರಿಂದ, ಮಹಾರಾಷ್ಟ್ರ ಸರ್ಕಾರದ ಮುಖ್ಯಮಂತ್ರಿ ಈ ಕುರಿತು ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

 

‘ಕರ್ನಾಟಕದ ಪರ ತೀರ್ಪು ಬರುವಂತೆ ನಮ್ಮ ವಕೀಲರ ತಂಡವನ್ನು ಸಿದ್ಧಗೊಳಿಸಲಾಗಿದೆ’ ಎಂದು ಮಾಧ್ಯಮಗಳೊಂದಿಗೆ ಮಾತನಾಡುವಾಗ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ‘ತಂಡದಲ್ಲಿ ಹಿರಿಯ ವಕೀಲರಾದ ಮುಕುಲ್ ರೋಹಟಗಿ, ಶ್ಯಾಮ್ ದಿವಾನ್, ಉದಯ್ ಹೊಳ್ಳಾ, ಮಾರುತಿ ಜಿರ್ಲೆ ಇದ್ದಾರೆ. ಇವರ ಜೊತೆ ಬುಧವಾರ ಬೆಳಿಗ್ಗೆ ವಿಡಿಯೊ ಸಭೆ ಇದೆ’ ಎಂದು ಅವರು ತಿಳಿಸಿದರು.

‘ರಾಜ್ಯ ಪುನರ್‌ವಿಂಗಡಣಾ ಕಾಯ್ದೆ ಪ್ರಕಾರ ಮಹಾರಾಷ್ಟ್ರಕ್ಕೆ ಸುಪ್ರೀಂಕೋರ್ಟ್‌ನಲ್ಲಿ ಸೋಲಾಗಲಿದೆ’ ಎಂದು ಬೊಮ್ಮಾಯಿ ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.

ಅತ್ತ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಡಿಸಿಎಂ ದೇವೇಂದ್ರ ಫಡಣವೀಸ್ ಅವರನ್ನೊಳಗೊಂಡ ನಿಯೋಗ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರನ್ನು ಶೀಘ್ರದಲ್ಲೇ ಭೇಟಿಯಾಗಲಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಶಿಂಧೆ ಅವರು ಶನಿವಾರ ಗಡಿ ವಿವಾದದ ಉನ್ನತಾಧಿಕಾರ ಸಮಿತಿಯ ಸಭೆ ನಡೆಸಿದ್ದು, ಮಹಾರಾಷ್ಟ್ರದ ಪರ ಸುಪ್ರೀಂಕೋರ್ಟ್‌ನಲ್ಲಿ ವಾದಿಸಲು ನೇಮಕವಾಗಿರುವ ಹಿರಿಯ ವಕೀಲ ಸಿ.ಎಸ್. ವೈದ್ಯನಾಥನ್ ಸೇರಿದಂತೆ 19 ಸದಸ್ಯರು ಸಭೆಯಲ್ಲಿ ಹಾಜರಿದ್ದರು. ಸುಪ್ರೀಕೋರ್ಟ್‌ನಲ್ಲಿ ಗಡಿ ವಿವಾದದ ಬಗ್ಗೆ ವಿಚಾರಣೆಯನ್ನು ತ್ವರಿತಗೊಳಿಸಲು ಮಾಡಬೇಕಾದ ಕೆಲಸಗಳ ಬಗ್ಗೆ ಸಭೆ ನಿರ್ಧಾರ ತೆಗೆದುಕೊಂಡಿದೆ.

ಕಾನೂನು ಹೋರಾಟದ ಉಸ್ತುವಾರಿಗಾಗಿ ಹಿರಿಯ ಸಚಿವರಾದ ಚಂದ್ರಕಾಂತ್ ಪಾಟೀಲ್ ಮತ್ತು ಶಂಭುರಾಜ್ ದೇಸಾಯಿ ಅವರ ದ್ವಿಸದಸ್ಯ ಸಮಿತಿಯನ್ನು ಶಿಂಧೆ ರಚಿಸಿದ್ದಾರೆ. ಗಡಿಯಲ್ಲಿ ಮಹಾರಾಷ್ಟ್ರದ ಜನರ ಪರ ಮಹಾರಾಷ್ಟ್ರ ಸರ್ಕಾರ ಇದೆ ಎಂದು ಅವರು ಅಭಯ ನೀಡಿದ್ದಾರೆ.

ಅಲ್ಲದೇ ಗಡಿಯಲ್ಲಿ ಮಹಾರಾಷ್ಟ್ರದ ಜನರ ಪರ ಹಾಗೂ ಗಡಿ ವಿವಾದದ ಬಗ್ಗೆ ಅರಿವು ಮೂಡಿಸಲು ವಿಶೇಷ ಸೆಲ್ ಅನ್ನು ಬಲಪಡಿಸುವುದಾಗಿ ಸಿಎಂ ಶಿಂಧೆ ಘೋಷಣೆ ಮಾಡಿದ್ದಾರೆ. ನಮ್ಮ ಜನರ ಪರ ಕೆಲಸ ಮಾಡಲು ಕರ್ನಾಟಕ ರಾಜ್ಯದ ಜೊತೆ ಸಂವಹನ ನಡೆಸಿಲೂ ಸಿದ್ಧ ಎಂದು ಅವರು ತಿಳಿಸಿದ್ದಾರೆ.

ಬೆಳಗಾವಿ, ಬೀದರ್, ಬಾಲ್ಕಿ ಸೇರಿದಂತೆ ಕರ್ನಾಟಕ ಗಡಿಯಲ್ಲಿರುವ 865 ಹಳ್ಳಿಗಳು ತಮಗೆ ಸೇರಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಮಹಾರಾಷ್ಟ್ರ ಸರ್ಕಾರ ವಾದಿಸುತ್ತಿದೆ. 1956ರ ರಾಜ್ಯ ಪುನರ್‌ ವಿಂಗಡಣಾ ಕಾಯ್ದೆಯನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್‌ ಮೊರೆ ಹೋಗಿದೆ. 2004ರಲ್ಲಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆ 18 ವರ್ಷಗಳ ಬಳಿಕ ನಡೆಯಲಿದೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ