Breaking News
Home / ರಾಜಕೀಯ / ಸಿಹಿ ಬೆಳೆದ ಅನ್ನದಾತರಿಗೆ ಕಹಿ ಅನುಭವ

ಸಿಹಿ ಬೆಳೆದ ಅನ್ನದಾತರಿಗೆ ಕಹಿ ಅನುಭವ

Spread the love

ಬ್ಬು ಬೆಳೆಗಾರರ ಸಮಸ್ಯೆ ಪ್ರತೀವರ್ಷವೂ ಕಗ್ಗಂಟು. ಸಕ್ಕರೆ ಕಾರ್ಖಾನೆ ಮಾಲಕರು ಹಾಗೂ ಬೆಳೆಗಾರರ ನಡುವೆ ಬೆಲೆ ತಿಕ್ಕಾಟ ಸಾಮಾನ್ಯವಾಗಿ ಬಿಟ್ಟಿದೆ. ಕೃಷ್ಣಾ ತೀರದ ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಹೋರಾಟ ನಡೆಯುತ್ತಲೇ ಇರುತ್ತದೆ.

ಸರಕಾರವೇ ಮಧ್ಯಸ್ಥಿಕೆ ವಹಿಸಿದರೂ ಪರಿಹಾರ ಎಂಬುದು ಮರೀಚಿಕೆಯಾಗಿದೆ. ಈ ವರ್ಷವೂ ಪ್ರತಿಭಟನೆ ಕಾವು ತುಸು ಹೆಚ್ಚೇ ನಡೆದಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದ 50 ದಿನಗಳಿಂದ ಹೋರಾಟದ ಕಿಚ್ಚು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಸಂಘರ್ಷ, ಸಂಧಾನದ ಸಮಗ್ರ ನೋಟ ಇಲ್ಲಿದೆ.

50 ದಿನಗಳಿಂದ ಹೋರಾಟ
ಬಾಗಲಕೋಟೆ ಜಿಲ್ಲೆಯ ಮುಧೋಳ, ಜಮಖಂಡಿ ಭಾಗದಲ್ಲಿ ಕಳೆದ 50 ದಿನಗಳಿಂದ ಕಬ್ಬು ಬೆಳೆಗಾರರ ಹೋರಾಟ ತೀವ್ರವಾಗಿದೆ. ರೈತರು ಮತ್ತು ಸಕ್ಕರೆ ಕಾರ್ಖಾನೆ ಮಾಲಕರ ಮಧ್ಯೆ ಸಂಧಾನ ಮಾಡಿ, ಸಕ್ಕರೆ ಕಾರ್ಖಾನೆಗಳನ್ನು ಸುಸೂತ್ರವಾಗಿ ಆರಂಭಿಸಲು ಬಾಗಲಕೋಟೆ ಜಿಲ್ಲಾಡಳಿತ ನಡೆಸಿದ ಪ್ರಯತ್ನವೂ ವಿಫಲವಾಗಿದೆ. ಸ್ವತಃ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹಾಗೂ ಹಿರಿಯ ಸಚಿವ ಗೋವಿಂದ ಕಾರಜೋಳ ಇಡೀ ದಿನ ನಡೆಸಿದ ಪ್ರಯತ್ನವೂ ಸಫಲವಾಗಿಲ್ಲ.

ಎಫ್‌ಆರ್‌ಪಿ ಬೆಲೆ ಎಷ್ಟಿದೆ?
ಎಫ್‌ಆರ್‌ಪಿ (ಫೇರ್‌ ಆಯಂಡ್‌ ರೆಮ್ಯೂನಿಟಿ ಪ್ರೈಜ್‌) ಪ್ರಕಾರ ಒಂದು ಹೆಕ್ಟೇರ್‌ ಕಬ್ಬು ಬೆಳೆಯಲು ಎಷ್ಟು ಖರ್ಚಾಗುತ್ತದೆ ಎಂಬುದನ್ನು ಕೇಂದ್ರ ಸರಕಾರ 2020-21ರಲ್ಲಿ ನಿರ್ಧರಿಸಿತ್ತು. ಆಗ ಬಿತ್ತನೆ ಬೀಜ, ಗೊಬ್ಬರ, ಉಳುಮೆ, ಭೂಮಿ ಸವಕಳಿ, ಪೈಪ್‌ಲೈನ್‌ ಸವಕಳಿ ಸಹಿತ ಒಟ್ಟು ಒಂದು ಹೆಕ್ಟೇರ್‌ ಕಬ್ಬು ಬೆಳೆಯಲು 2.31 ರೂ. ಲಕ್ಷ ಖರ್ಚಾಗುತ್ತದೆ ಎಂದು ಹೇಳಿತ್ತು. ಆದರೆ 2021-22ರಲ್ಲಿ ಅದನ್ನು 1.90 ಲಕ್ಷಕ್ಕೆ ಇಳಿಕೆ ಮಾಡಿದೆ. ಅಂದರೆ ಬೆಲೆ ಏರಿಕೆಯಾಗುತ್ತಿದ್ದರೂ ಕಬ್ಬು ಬೆಳೆಯುವ ಖರ್ಚನ್ನು ಕಡಿಮೆ ಹೇಗೆ ಮಾಡಿತು ಎಂಬುದು ರೈತರ ಪ್ರಶ್ನೆ.

ಬೆಲೆ ನಿಗದಿ ಮಾಡುವುದು ಯಾರು?
ಕೇಂದ್ರ ಸರಕಾರದ ಅಧೀನದಲ್ಲಿ ಸಿಎಸಿಪಿ (ಸೆಂಟ್ರಲ್‌ ಅಗ್ರಿಕಲ್ಚರ್‌ ಕಲ್ಟಿವೇಶನ್‌ ಫುಡ್‌ ಪ್ರೊಡಕ್ಷನ್‌) ಕಮಿಟಿ ಇದ್ದು, ಅದರ ಶಿಫಾರಸಿನ ಮೇರೆಗೆ ಕಬ್ಬು ಬೆಳೆಯುವ ಖರ್ಚು-ವೆಚ್ಚದ ಬೆಲೆ ನಿಗದಿ ಮಾಡುತ್ತದೆ. ಇದು ವಾಸ್ತವದಲ್ಲಿಲ್ಲ ಎಂದು ರೈತರು ಹೇಳುತ್ತಾರೆ. ಒಂದು ಸಾವಿರವಿದ್ದ ಡಿಎಪಿ ಗೊಬ್ಬರ 1350ರೂ., ಪ್ರೊಟ್ಯಾಶಿಯಂ 850 ಇದ್ದದ್ದು ಈಗ 1100ರೂ.ಗೆ ಹೆಚ್ಚಳವಾಗಿದೆ. ಹಾಗೆಯೇ ಪ್ರತೀಯೊಂದು ಬೆಲೆ ಏರಿಕೆಯಾದರೂ ರೈತರು ಬೆಳೆಯುವ ಬೆಳೆಗಳ ಬೆಲೆ ಏರಿಕೆಯಾಗುತ್ತಿಲ್ಲ ಎಂಬುದು ಅವರ ಅಸಮಾಧಾನ.

ಸಕ್ಕರೆ ಕಾರ್ಖಾನೆ ಮಾಲಕರ ವಾದ ಏನು?
ಸರಕಾರ ದ ಮಾತಿಗೆ ಕಾರ್ಖಾನೆ ಮಾಲಕರು ಸೊಪ್ಪು ಹಾಕುತ್ತಿಲ್ಲ. ಕೇಂದ್ರ ಸರಕಾರ ನಿಗದಿ ಮಾಡಿದ ಎಫ್‌ಆರ್‌ಪಿ ಬೆಲೆಗಿಂತಲೂ ಹೆಚ್ಚಿನ ಬೆಲೆ ಕೊಡುತ್ತಿದ್ದೇವೆ. ಇದಕ್ಕೂ ಹೆಚ್ಚಿಗೆ ಒಂದು ರೂಪಾಯಿ ಕೊಡಲೂ ಆಗಲ್ಲ ಎನ್ನುತ್ತಿದ್ದಾರೆ. ಅಲ್ಲದೇ ಇಡೀ ದೇಶದಲ್ಲೇ ಅತೀ ಹೆಚ್ಚು ಬೆಲೆ ನೀಡುವ ಕಾರ್ಖಾನೆಗಳಲ್ಲಿ ಬಾಗಲಕೋಟೆ ಜಿಲ್ಲೆಯ ಕಾರ್ಖಾನೆಗಳು 2ನೇ ಸ್ಥಾನದಲ್ಲಿವೆ. ಜತೆಗೆ ಎಫ್‌ಆರ್‌ಪಿಗಿಂತ ಹೆಚ್ಚಿನ ಬೆಲೆ ನೀಡಲಾಗುತ್ತಿದೆ. ಎಫ್‌ಆರ್‌ಪಿ ಅನ್ವಯ ಮೂರು ಕಂತಿನಲ್ಲಿ ಕಬ್ಬಿನ ಬಿಲ್‌ ಕೊಡಬೇಕೆಂದಿದೆ. ಆದರೆ ನಾವು ಒಂದೇ ಕಂತಿನಲ್ಲಿ ಕೊಡುತ್ತೇವೆ. ಅಲ್ಲದೇ ಎಲ್ಲ ಉಪ ಉತ್ಪನಗಳ ಲಾಭಾಂಶದಲ್ಲಿ ಶೇ.82ರಷ್ಟು ನೀಡುತ್ತೇವೆ. ಹೀಗಾಗಿಯೇ ಪ್ರತಿಯೊಂದು ಕಾರ್ಖಾನೆಗಳ ಸಾಲ ಪ್ರತೀವರ್ಷ 50 ಕೋಟಿಯಷ್ಟು ಹೆಚ್ಚುತ್ತಲೇ ಇರುತ್ತದೆ ಎಂಬುದು ಕಾರ್ಖಾನೆ ಮಾಲಕರ ವಾದ. ಇತ್ತ ಕಬ್ಬು ಬೆಳೆಗಾರರು ಟನ್‌ಗೆ 2900 ರೂ. ಬೆಲೆ ಕೊಡದೆ ಕಾರ್ಖಾನೆ ಆರಂಭಿಸಲು ಬಿಡಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಈಗ ಇಬ್ಬರ ನಡುವಿನ ಗುದ್ದಾಟ ಜೋರಾಗಿದೆ.

ರೈತರಿಗೆ ಅನ್ಯಾಯ ಆಗುತ್ತಿದೆಯೇ?
ಒಂದು ಟನ್‌ ಕಬ್ಬಿಗೆ ಎಫ್‌ಆರ್‌ಪಿ ಬೆಲೆ ನಿಗದಿ ಮಾಡಿದ್ದು, ಶೇ.10ರ ಮೇಲ್ಪಟ್ಟು ರಿಕವರಿ ಇದ್ದರೆ ಅದಕ್ಕೆ 3050 ರೂ. ನಿಗದಿ ಮಾಡಲಾಗಿದೆ. ಶೇ.10.25ಕ್ಕಿಂತ ಕಡಿಮೆ ರಿಕವರಿ ಬಂದರೆ ತಲಾ 305 ರೂ. ಕಡಿತ ಮಾಡಲಾಗುತ್ತದೆ. ಇದರಲ್ಲಿ ಕಬ್ಬು ಕಟಾವು, ಸಾಗಾಟ ವೆಚ್ಚವೂ ಸೇರಿದರೆ ರೈತರ ಕೈಗೆ 2000 ರೂ. ಕೂಡ ತಲುಪುವುದಿಲ್ಲ. ರೈತರ ಲೆಕ್ಕಾಚಾರದ ಪ್ರಕಾರ ಒಂದು ಟನ್‌ ಕಬ್ಬು ಬೆಳೆಯಲು ಕನಿಷ್ಟ 3400 ರೂ. ಖರ್ಚಾಗುತ್ತದೆ. ಅದರ ಆಧಾರದ ಮೇಲೆ ರೈತರ ವಾಸ್ತವ ಪರಿಸ್ಥಿತಿ ನೋಡಿ ಎಫ್‌ಆರ್‌ಪಿ ಬೆಲೆ ನಿಗದಿಯಾಗಬೇಕು ಎಂಬುದು ಅವರ ಒತ್ತಾಯ.

ಎಸ್‌ಎಪಿ ಜಾರಿಗೆ ಹಿಂದೇಟು ಏಕೆ?
ಸಕ್ಕರೆ ಕಾರ್ಖಾನೆ-ರೈತರ ಮಧ್ಯೆ ಪ್ರತೀವರ್ಷ ನಡೆಯು ತ್ತಿರುವ ಸಂಘರ್ಷ-ಹೋರಾಟ ತಪ್ಪಿಸಲೆಂದೇ 2013 ರಲ್ಲಿ ರಾಜ್ಯದಲ್ಲಿ ಎಸ್‌ಎಪಿ (ಸ್ಟೇಟ್‌ ಅಡ್ವೆ$çಜರಿ ಪ್ರೈಜ್‌) ಜಾರಿಗೆ ತರಲಾಗಿತ್ತು. ಇದರಿಂದ ರೈತರಿಗೆ ಅನುಕೂಲ ವಾಗುತ್ತಿತ್ತು. ಅದರಲ್ಲಿ ಕೆಲವು ನ್ಯೂನತೆಗಳಿದ್ದು ಅದರನ್ನು ಸರಿಪಡಿಸಲು ರೈತರು ಬೆಳಗಾವಿ ಅಧಿವೇಶನದ ವೇಳೆ ಹೋರಾಟ ನಡೆಸಿದ್ದರು. ಓರ್ವ ರೈತ ಕೂಡ ಆ ವೇಳೆ ಅಸುನೀಗಿದ್ದ. ಆಗ ರೈತರ ಕೈಗೆ ಚಾಕೋಲೆಟ್‌ ಕೊಟ್ಟಂತೆ ಟನ್‌ ಕಬ್ಬಿಗೆ 150 ರೂ. ಪ್ರೋತ್ಸಾಹಧನ ನೀಡಲಾಯಿತೇ ಹೊರತು ಎಸ್‌ಎಪಿ ಕಾಯಿದೆಯ ನ್ಯೂನತೆ ಸರಿಪಡಿಸಿ ಜಾರಿಗೊಳಿಸಲಿಲ್ಲ.

ಕಾರ್ಖಾನೆಗಳಿಗೆ ದುಪ್ಪಟ್ಟು ಲಾಭ
ರೈತ ಸಂಘಟನೆಗಳ ಪ್ರಮುಖರು ಹೇಳುವ ಪ್ರಕಾರ ಸಕ್ಕರೆ ಕಾರ್ಖಾನೆಗಳು ಒಂದು ಟನ್‌ ಕಬ್ಬು ನುರಿಸುವುದರಿಂದ ದುಪ್ಪಟ್ಟು ಲಾಭ ಪಡೆಯುತ್ತವೆ. ಜತೆಗೆ ಕೇಂದ್ರ-ರಾಜ್ಯ ಸರಕಾರಗಳಿಗೆ ಪರೋಕ್ಷ ಮತ್ತು ಪ್ರತ್ಯಕ್ಷವಾಗಿ 6 ರಿಂದ 8 ಸಾವಿರ ರೂ. ತೆರಿಗೆ ಹೋಗುತ್ತದೆ. ಆದರೆ ಎಫ್‌ಆರ್‌ಪಿ ಅನ್ವಯ ಕಬ್ಬು ನುರಿಸಿದ್ದಕ್ಕೆ ಮಾತ್ರ ಬೆಲೆ ನೀಡಲಾಗುತ್ತದೆ. ಉಳಿದ ಉಪ ಉತ್ಪನ್ನಗಳ ಲಾಭ ರೈತರಿಗೆ ಸಿಗುತ್ತಿಲ್ಲ. ಕಬ್ಬಿನ ಸಿಪ್ಪೆಯಿಂದ ವಿದ್ಯುತ್‌ ಉತ್ಪಾದನೆಯಾಗುತ್ತದೆ. ಜತೆಗೆ ಪೇಪರ್‌, ಊಟದ ತಟ್ಟೆ ಹೀಗೆ ಹಲವು ಉಪ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಮೊಲ್ಯಾಸಿಸ್‌ನಿಂದ ಸಾರಾಯಿ ಉತ್ಪಾದಿಸಿದರೆ, ಕಬ್ಬಿನ ಹಾಲಿನಿಂದ ಎಥೆನಾಲ್‌ ಉತ್ಪಾದನೆಯಾಗುತ್ತದೆ. ಎಥೆನಾಲ್‌ನಲ್ಲಿ ಎ ಮತ್ತು ಬಿ ಗ್ರೇಡ್‌ ಇದ್ದು, ಪ್ರತ್ಯೇಕ ಬೆಲೆ ಸಿಗುತ್ತದೆ. ಮುಖ್ಯವಾಗಿ ಒಂದು ಟನ್‌ ಕಬ್ಬು ನುರಿಸಿದರೆ 40 ಕೆಜಿ ಮೊಲ್ಯಾಶಿಸ್‌ ಬರುತ್ತಿದ್ದು, ಅದರಿಂದ 10 ಲೀಟರ್‌ ಸ್ಪೀರಿಟ್‌ ಉತ್ಪಾದನೆಯಾಗುತ್ತದೆ. ಆ 10 ಲೀಟರ್‌ ಸ್ಪೀರಿಟ್‌ನಿಂದ 30 ಲೀಟರ್‌ ಮದ್ಯ ಉತ್ಪಾದನೆಯಾಗುತ್ತದೆ. 180 ಎಂಎಲ್‌ ಮದ್ಯದ ಬಾಟಲಿಗೆ ತಗುಲುವ ವೆಚ್ಚದ (ಸಾದಾ ಮದ್ಯ) 25ರಿಂದ 30 ರೂ. ಮಾತ್ರ. ಆದರೆ ಅದನ್ನು 90ರಿಂದ 110 ರೂ. ವರೆಗೆ ಮಾರಾಟ ಮಾಡಲಾಗುತ್ತದೆ. ಇದರಿಂದ ಕನಿಷ್ಠ 50ರಿಂದ 60 ರೂ. ಸರಕಾರದ ಬೊಕ್ಕಸಕ್ಕೆ ತೆರಿಗೆ ಮೂಲಕ ಹೋಗುತ್ತದೆ. ಹೀಗಿದ್ದಾಗ ರೈತರಿಗೆ ಏಕೆ ಯೋಗ್ಯ ಬೆಲೆ ಕೊಡುವುದಿಲ್ಲ ಎಂಬುದು ರೈತರ ಪ್ರಶ್ನೆ. ಇದನ್ನೇ ರಂಗರಾಜ್‌ ವರದಿ ಪ್ರಕಾರ, ಸಕ್ಕರೆ ಕಾರ್ಖಾನೆಗಳು ಉತ್ಪಾದಿಸುವ ಉಪ ಉತ್ಪನಗಳಲ್ಲಿ ಶೇ.70ರಷ್ಟು ಲಾಭ ರೈತರಿಗೆ ಕೊಡಬೇಕು ಎಂಬುದು ಸ್ಪಷ್ಟವಾಗಿ ಹೇಳುತ್ತದೆ. ಇದನ್ನು ಯಾವ ಕಾರ್ಖಾನೆಯವರೂ ಪಾಲನೆ ಮಾಡಲ್ಲ.

ರೈತರ ಹೋರಾಟದ ಕವಲು ದಾರಿ
ಬಾಗಲಕೋಟೆ ಜಿಲ್ಲೆಯಲ್ಲಿ 50 ದಿನಗಳಿಂದ ಹೋರಾಟ ನಡೆದಿದ್ದು, ಹೊಲದಲ್ಲಿ ಕಬ್ಬು ಒಣಗಿ ಹೋಗುತ್ತಿದೆ. ಕಾರ್ಖಾನೆ ಮಾಲಕರು-ರೈತ ಚಳವಳಿಗಾರರು ಪ್ರತಿಷ್ಠೆ ತೋರದೆ ಸಂಧಾನದ ಮೂಲಕ ಸಮಸ್ಯೆಗೆ ಮುಕ್ತಿ ಹೇಳಬೇಕಿದೆ. ಮುಖ್ಯವಾಗಿ ಸರಕಾರವೂ ಮಧ್ಯಪ್ರದೇಶಿಸಿ ನ್ಯಾಯ ಸಮ್ಮತ ಬೆಲೆ ಕೊಡಿಸಲು ಗಟ್ಟಿ ನಿರ್ಧಾರ ಕೈಗೊಳ್ಳಬೇಕಿದೆ. ಮತ್ತೂಂದೆಡೆ ಬೆಳೆದ ಕಬ್ಬು ಹೊಲದಲ್ಲಿ ಒಣಗುತ್ತಿದೆ. ಮಹಾರಾಷ್ಟ್ರದಿಂದ ಬಂದಿದ್ದ ಕಬ್ಬು ಕಡಿಯುವ ಗ್ಯಾಂಗ್‌ಗಳು ಮರಳಿ ಹೊರಟಿವೆ. ಹೀಗಾಗಿ ಬೆಳೆದ ಬೆಳೆ ಕೈಗೆ ಬರಲ್ಲ ಎಂದು ಆತಂಕದಲ್ಲಿರುವ ರೈತರು, ಬೆಲೆ ಎಷ್ಟು ಕೊಡ್ತೀರಿ ಎಂಬುದು ಆ ಮೇಲೆ ನಿರ್ಧಾರ ಮಾಡಿ. ಈಗ ನಮ್ಮ ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಸಾಗಿಸಿ ಎಂದು ಮತ್ತೂಂದು ಗುಂಪು ಪ್ರತಿಭಟನೆ ಹಾದಿ ಹಿಡಿದಿದೆ. ಇವೆಲ್ಲದರ ಪರಿಣಾಮ ಕಬ್ಬು ಬೆಳೆಗಾರ ರೈತರ ಹೋರಾಟವೂ ಕವಲು ದಾರಿಯಂತಾಗಿದೆ.

ಬಾಗಲಕೋಟೆ ಜಿಲ್ಲೆಯ 14 ಸಕ್ಕರೆ ಕಾರ್ಖಾನೆಗಳಲ್ಲಿ ಒಂದು ಕಾರ್ಖಾನೆ ಟನ್‌ಗೆ 2900 ಬೆಲೆ ಘೋಷಿಸಿ, ಕಬ್ಬು ನುರಿಸುವುದನ್ನು ಆರಂಭಿಸಿದೆ. ಕಾರ್ಖಾನೆ ಮಾಲಕರ ಪ್ರತಿಷ್ಠೆಯ ಪರಿಣಾಮ ರೈತರ ಹೋರಾಟ ಯಶಸ್ವಿಯಾಗುತ್ತಿಲ್ಲ. ಇದಕ್ಕೆ ತಾರ್ಕಿಕ ಅಂತ್ಯ ಕಂಡುಕೊಳ್ಳಬೇಕಿದೆ.
-ನಾಗೇಶ ಸೋರಗಾವಿ, ರೈತ ಪ್ರಮುಖ, ಮುಧೋಳ


Spread the love

About Laxminews 24x7

Check Also

ಬಂಗಾರ ದರ ಮತ್ತೆ ಇಳಿಕೆ

Spread the love 26: ಬಂಗಾರ ದರ ನಿನ್ನೆಗೆ ಅಂದರೆ ಜೂನ್‌ 25ಕ್ಕೆ ಹೋಲಿಕೆ ಮಾಡಿದರೆ ಇಂದು (ಜೂನ್‌ 24) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ