ಬೆಳಗಾವಿ: ‘ಹಿಂದೂ ಎಂಬುದು ಧರ್ಮವಲ್ಲ, ಅದು ಜೀವನಕ್ರಮವೆಂದು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರೇ ಹೇಳಿದ್ದಾರೆ. ಆದರೆ, ಇಂದು ವೈದಿಕ ಧರ್ಮಕ್ಕೆ ಹಿಂದೂ ಧರ್ಮ ಎನ್ನಲಾಗುತ್ತಿದೆ. ಹೀಗೆ ಉಚ್ಚರಿಸಿದರೆ ಲಿಂಗಾಯತರೇನು ಹಿಂದೂಗಳಾಗು ವುದಿಲ್ಲ’ ಎಂದು ಗದುಗಿನ ತೋಂಟದಾರ್ಯ ಮಠದ ಪೀಠಾಧಿಪತಿ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವೇದ, ಆಗಮ, ಪುರಾಣವನ್ನು ವಿರೋಧಿಸಿದ ಲಿಂಗಾಯತ ಅವೈದಿಕ ಧರ್ಮವಾಗಿದೆ. ಲಿಂಗಾಯತರು ಮತ್ತು ಹಿಂದೂಗಳ ಆಚರಣೆಯಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ಇವೆ’ ಎಂದರು.
‘ಹಿಂದೂಗಳು ದೇವಸ್ಥಾನ
ದಲ್ಲಿ ದೇವರನ್ನು ಪೂಜಿಸಿದರೆ, ಲಿಂಗಾ ಯತರು ತಾವು ಧರಿಸಿದ ಲಿಂಗವನ್ನೇ ಪೂಜಿಸುತ್ತಾರೆ. ಹಿಂದೂಗಳು ಮೃತಪಟ್ಟರೆ ಸುಡಲಾಗುತ್ತದೆ. ಅದೇ ಲಿಂಗಾಯತರನ್ನು ಹೂಳಲಾಗುತ್ತದೆ. ಈ ದೇಶದಲ್ಲಿ ವಾಸಿಸುವ ಜೈನರು, ಬೌದ್ಧರು, ಸಿಖ್ಖರು, ವೈದಿಕರು, ಲಿಂಗಾಯತರು ಸೇರಿ ಎಲ್ಲರೂ ಪ್ರಾದೇಶಿಕವಾಗಿ ಹಿಂದೂಗಳು. ಆದರೆ, ಧಾರ್ಮಿಕ ವಿಚಾರ ಬಂದಾಗ ಲಿಂಗಾಯತರು ಪ್ರತ್ಯೇಕ’ ಎಂದು ಸ್ಪಷ್ಟಪಡಿಸಿದರು.
‘ಈಗ ಹಿಂದುತ್ವದ ಬಗ್ಗೆ ಬೇರೆ ಬೇರೆ ರೀತಿ ಅರ್ಥೈಸಲಾಗುತ್ತಿದೆ. ಹಿಂದೂ ಪದ ಪರ್ಷಿಯನ್ ಭಾಷೆಯಿಂದ ಬಂದಿದೆ. ಆ ಭಾಷೆಯಲ್ಲಿ ‘ಸ’ಕಾರವನ್ನು ‘ಹ’ಕಾರವನ್ನಾಗಿ ಉಚ್ಚರಿಸುತ್ತಾರೆ. ಸಿಂಧೂ ನದಿ ಈಚೆಗೆ ಇರುವ ಜನರನ್ನು ಅವರು ಹಿಂದೂಗಳೆಂದು ಕರೆದಿದ್ದರು. ಆದರೆ, ಹಿಂದೂ ಪದವನ್ನು ಒಂದು ಜಾತಿ,ಧರ್ಮಕ್ಕೆ ಸಿಮೀತಗೊಳಿಸಿದರೆ ಇಂತಹ ಅನಾಹುತ ಸಂಭವಿಸುತ್ತವೆ’ ಎಂದು ಹೇಳಿದರು.
‘ಸಿಂಧೂ ಎಂಬ ಶಬ್ದದಿಂದಲೇ ಹಿಂದೂ ಪದ ಸೃಷ್ಟಿಯಾಗಿದೆ. ಇಂದು ಪಾಕಿಸ್ತಾನಲ್ಲಿರುವ ಸಿಂಧೂ ನದಿಪಾತ್ರದ ಜನರು ಆ ಭಾಗವನ್ನು ‘ಸಿಂಧೂಸ್ತಾನ’ ಮಾಡುವಂತೆ ಹೋರಾಟ ನಡೆಸಿದ್ದಾರೆ. ಇದು ನದಿಯ ಹೆಸರೇ ಹೊರತು, ವಿವಾದದ ವಿಷಯವಲ್ಲ’ ಎಂದರು.
‘ಲಿಂಗಾಯತ ಧರ್ಮದಲ್ಲಿ ಸುಮಾರು 108 ಒಳಪಂಗಡಗಳಿವೆ. ಅವುಗಳಿಗೆ ಮೀಸಲಾತಿ ನೀಡಬೇಕೆಂದು ನಡೆಸುತ್ತಿರುವ ಹೋರಾಟವನ್ನು ನಾವೂ ವಿರೋಧಿಸುವುದಿಲ್ಲ. ಅವರೂ ಮೀಸಲಾತಿ ಕೇಳುವುದರಲ್ಲೂ ತಪ್ಪೇನಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಲಿಂಗಾಯತ ಧರ್ಮದ ಹೋರಾಟ ಇನ್ನೂ ನಿಂತಿಲ್ಲ. ಅದು ಬೂದಿ ಮುಚ್ಚಿದ ಕೆಂಡದಂತಿದೆ. ಅದು ಯಾವಾಗ ಹೊರಬರುತ್ತದೆ ಎಂದು ಹೇಳಲಾಗದು. ಸದ್ಯಕ್ಕೆ ಬೇರೆ ಜಾತಿಯವರು ಪ್ರತ್ಯೇಕ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಈ ಮಧ್ಯೆ, ನಾವೂ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ಮಾಡುವುದು ಸೂಕ್ತವಲ್ಲ’ ಎಂದರು.