ಚಿಕ್ಕೋಡಿ : ರಸ್ತೆ ನಿರ್ಮಿಸಲು ಸ್ವಾದೀನ ಪಡೆದಿದ್ದ ಭೂಮಿಗೆ ರೈತನಿಗೆ ₹11 ಲಕ್ಷ ಪರಿಹಾರಧನ ನೀಡಲು ವಿಳಂಬ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದಂತೆ ಉಪವಿಭಾಗಾಧಿಕಾರಿ ಮತ್ತು ಲೋಕೋಪಯೋಗಿ ಇಲಾಖೆ ಎಇಇ ಅವರ ವಾಹನಗಳನ್ನು ಗುರುವಾರ ಜಪ್ತಿ ಮಾಡಲಾಗಿದೆ.
15 ವರ್ಷದ ಹಿಂದೆ ಚಿಕ್ಕೋಡಿ ತಾಲ್ಲೂಕಿನ ಮಾಂಗೂರ (ಈಗಿನ ನಿಪ್ಪಾಣಿ ತಾಲ್ಲೂಕು) ಗ್ರಾಮದ ರೈತ ಬುದ್ದಿರಾಜ ಶಾಂತಿನಾಥ ಪಾಟೀಲ ಅವರ 31 ಗುಂಟೆ ಭೂಮಿಯನ್ನು ಇಲಾಖೆ ಪಡೆದುಕೊಂಡಿತ್ತು. ಈವರೆಗೂ ರೈತನಿಗೆ ಪರಿಹಾರ ಧನ ನೀಡಿರಲಿಲ್ಲ.
ರೈತ ಪರಿಹಾರ ಕೋರಿ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ 2021ರಲ್ಲಿ ₹11,70,757 ಪರಿಹಾರ ನೀಡಲು ಆದೇಶಿಸಿತ್ತು. ಒಂದು ವರ್ಷ ಕಳೆದರೂ ಪರಿಹಾರ ನೀಡದ್ದರಿಂದ ವಾಹನಗಳ ಜಪ್ತಿಗೆ ನ್ಯಾಯಾಲಯ ಆದೇಶಿಸಿತ್ತು.
ವಾಹನ ಜಪ್ತಿಗೆ ಬಂದ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮಾಧವ ಗಿತ್ತೆ ಮತ್ತು ನ್ಯಾಯಾಲಯ ಸಿಬ್ಬಂದಿ ಮಧ್ಯೆ ಕೆಲಹೊತ್ತು ಮಾತಿನ ಚಕಮಕಿಯೂ ನಡೆಯಿತು.
Laxmi News 24×7