ನೆಲಮಂಗಲ: ಪ್ರೇಮಿಗಳ ಮದುವೆಗೆ ಪೋಷಕರು ಅಡ್ಡಿಯಾದ ಹಿನ್ನೆಲೆಯಲ್ಲಿ ಪೊಲೀಸರೇ ಮುಂದೆ ನಿಂತು ಮದುವೆ ಮಾಡಿದ ಘಟನೆ ನೆಲಮಂಗಲ ನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಮೂಲತಃ ಹಾವೇರಿಯ, ಪ್ರಸ್ತುತ ಕೆ.ಆರ್.ಪುರ ನಿವಾಸಿ ಕರಬಸಪ್ಪ (24) ಹಾಗೂ ಕಾರವಾರ ಮೂಲದ, ಪ್ರಸ್ತುತ ನೆಲಮಂಗಲ ನಿವಾಸಿ ಬಿಂದು (19) ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು.
ಇವರು ಪ್ರೀತಿಯ ವಿಚಾರವನ್ನು ಮನೆಯಲ್ಲಿ ತಿಳಿಸಿದ್ದಾರೆ. ಆದರೆ ಪೋಷಕರು ಮಾತ್ರ ಇವರಿಬ್ಬರ ಪ್ರೀತಿಯನ್ನು ಬೆಂಬಲಿಸಿಲ್ಲ.
ಪೋಷಕರ ಬೆಂಬಲ ವ್ಯಕ್ತವಾಗದ ಹಿನ್ನೆಲೆ ಪ್ರೇಮಿಗಳು ಸಹಾಯ ಕೇಳಿ ಹೋಗಿದ್ದು ನೇರವಾಗಿ ಪೊಲೀಸರ ಬಳಿ. ಮನೆಯವರು ಒಪ್ಪುತ್ತಿಲ್ಲ, ಹೇಗಾದರೂ ಮಾಡಿ ನಮ್ಮ ವಿವಾಹ ಮಾಡಿ ಎಂದು ಈ ಜೋಡಿ ಪೊಲೀಸರು ಬೆನ್ನು ಬಿದ್ದು, ಅಳಲು ತೋಡಿಕೊಂಡಿದ್ದಾರೆ.
ಇಕ್ಕಟ್ಟಿಗೆ ಸಿಲುಕಿದ ಪೊಲೀಸರು, ಪ್ರೇಮಿಗಳಿಬ್ಬರು ಮೇಜರ್ ಆದ ಕಾರಣ ವಿವಾಹಕ್ಕೆ ಸಮ್ಮತಿ ಸೂಚಿಸಿದ್ದಾರೆ. ಕೊನೆಗೆ ಪೋಷಕರ ವಿರೋಧದ ನಡುವೆ ನಡುರಾತ್ರಿ ನಗರದ ಕವಾಡಿ ಮಠದ ರುದ್ರೇಶ್ವರ ದೇಗುಲದಲ್ಲಿ ವಿವಾಹ ಕಾರ್ಯಕ್ರಮ ನಡೆದಿದೆ. ಈ ಮೂಲಕ 2 ವರ್ಷದ ಪ್ರೀತಿಗೆ ವಿಧಿಯಿಲ್ಲದೆ ನೆಲಮಂಗಲ ಪೊಲೀಸರು ಸಾಕ್ಷಿಯಾಗಿದ್ದಾರೆ. ಕಂಕಣ ಭಾಗ್ಯ ಲಭಿಸುತ್ತಿದ್ದಂತೆ ಸಿಹಿ ಹಂಚಿ, ಆರಕ್ಷಕರ ಆಶೀರ್ವಾದ ಪಡೆದುಕೊಂಡಿದ್ದಾರೆ,