ಸಿದ್ದರಾಮಯ್ಯ ರಾಹುಲ್ ಗಾಂಧಿ ಅವರ ನೆರಳಿನಲ್ಲಿದ್ದಾರೆ. ಹೀಗಾಗಿ ಅವರ ಸಹವಾಸದಿಂದ ಕೆಲವು ಬಾರಿ ರಾಹುಲ್ ಗಾಂಧಿ ತರಹ ಮಾತನಾಡುತ್ತಾರೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿಗಳು ಶುಕ್ರವಾರ ರಾಜ್ಯಕ್ಕೆ ಬಂದು ಅದ್ಭುತ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ. ಅದರಲ್ಲಿ ಮುಖ್ಯವಾಗಿ ಒಂದೇ ಭಾರತಂ ಟ್ರೈನ್ ಗೆ ಚಾಲನೆ, ಕೆಂಪೇಗೌಡ ಮೂರ್ತಿ ಉದ್ಘಾಟನೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಉದ್ಘಾಟನೆ ಮಾಡಿದ್ದಾರೆ. ಇವೆಲ್ಲವೂ ನಮ್ಮ ಸಂಸ್ಕೃತಿ, ಪರಂಪರೆಗೆ ಸಂಬಂಧಿವೆ. ಆದರೆ ವಿರೋಧಿಗಳು ತಾವು ಮಾಡದೇ ಇರುವ ಕಾರ್ಯವನ್ನು ನಾವು ಮಾಡಿದ್ದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ ಎಂದರು.
ಒಂದೇ ಭಾರತಂ ಟ್ರೈನ್ ಭಾರತದಲ್ಲಿ ತಯಾರಾದ ಟ್ರೈನ್, ಸರಿಸುಮಾರು ಗಂಟೆಗೆ 180 ಕಿ.ಮೀ ವೇಗವಾಗಿ ಸಂಚಾರ ಮಾಡುತ್ತದೆ. ಅದರಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ, ರೈಲ್ವೆ ಹಳ್ಳಿಗಳ ಡಬ್ಲಿಂಗ್, ವಿದ್ಯುತೀಕರಣ ಕಾರ್ಯ ಆಗಿದ್ದು ನಮ್ಮ ಆಡಳಿತದಲ್ಲಿಯೇ. ಇದು ನಾವು ಮಾಡಿದ ಸಾಧನೆಯಾಗಿದೆ. ಆದರೆ ಕಾಂಗ್ರೆಸ್ ನವರಿಗೆ ಜನರ ಅಭಿವೃದ್ಧಿ ಬೇಕಾಗಿಲ್ಲ. ಅವರಿಗೆ ಬೇಕಾಗಿದ್ದು ರಾಜಕೀಯ ಎಂದು ಟಾಂಗ್ ಕೊಟ್ಟರು.
ಶುಕ್ರವಾರ ಕೆಂಪೇಗೌಡ ಮೂರ್ತಿ ಉದ್ಘಾಟನೆ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರಿಗೆ ಆಹ್ವಾನಿಸಿಲ್ಲ ಎಂದು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಪ್ರಲ್ಹಾದ್ ಜೋಶಿ, ಈ ಬಗ್ಗೆ ಮುಖ್ಯಮಂತ್ರಿ ಸೇರಿದಂತೆ ಸಚಿವರೊಂದಿಗೆ ಮಾತನಾಡಿದ್ದೇನೆ. ಆದರೆ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಇನ್ನಿತರರು ವಿರೋಧ ಮಾಡಿದ್ದಕ್ಕೆ ಅರ್ಥವಿಲ್ಲ. ಕುಮಾರಸ್ವಾಮಿ ಅವರ ಕುಟುಂಬ ಸಿಎಂ, ಸಚಿವರು, ಶಾಸಕರು ಆಗಿದ್ದಾರೆ. ಆದರೆ ಈವರೆಗೆ ಯಾವ ಕೆಲಸದಲ್ಲಿ ಕೆಂಪೇಗೌಡರ ಹೆಸರನ್ನು ಈಡಲು ಮುಂದಾಗಿಲ್ಲ. ಹೀಗಾಗಿ ತಾವು ಮಾಡಲಾರದನ್ನು ಬಿಜೆಪಿ ಮಾಡಿದ್ದಕ್ಕೆ ಹೊಟ್ಟೆ ಉರಿಗಾಗಿ ಈ ರೀತಿಯಾಗಿ ಮಾತನಾಡುತ್ತಾರೆಂದರು.
ಮೈಸೂರಿನಲ್ಲಿ ಟಿಪ್ಪು ಮೂರ್ತಿ ಪ್ರತಿಷ್ಠಾಪನೆ ಹೇಳಿಕೆ ನೀಡಿದ ತನ್ವೀರ್ ಶೇಟ್ ವಿಚಾರವಾಗಿ ಮಾತನಾಡಿ, ಟಿಪ್ಪು ಆಚರಣೆಗೆ ನಮ್ಮ ವಿರೋಧವಿದೆ. ಯಾರು ಟಿಪ್ಪುವಿಗೆ ಬೆಂಬಲ ಕೊಡತ್ತಾರೆ. ಅವರನ್ನು ಜನರು ಮನೆಗೆ ಕಳಿಸುತ್ತಾರೆ ಎಂದರು.