ಬಾಗಲಕೋಟೆ, ನವೆಂಬರ್ 9: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮುದ್ದಾಪುರ ಗ್ರಾಮ ವ್ಯಾಪ್ತಿಯಲ್ಲಿರುವ ಜೆ.ಕೆ. ಸಿಮೆಂಟ್ ಕಂಪನಿ ಆವರಣದಲ್ಲಿ ಪುರಾತನ ವಾಸ್ತುಶಿಲ್ಪ ಕಲೆಯ ಅನುಸಾರ ಯದುರೇಶ್ವರ ಶಿವ ಮಂದಿರವನ್ನು ಕಟ್ಟಲಾಗಿದೆ. ವಿಶೇಷವೆಂದರೆ ಈ ದೇವಾಲಯದ ನಿರ್ಮಾಣಕ್ಕೆ ಸಿಮೆಂಟ್, ಕಬ್ಬಿಣವನ್ನು ಬಳಸದೇ ಕಟ್ಟಲಾಗಿದ್ದು, ಪ್ರವಾಸಿ ಕೇಂದ್ರವಾಗಿ ಗಮನ ಸೆಳೆಯುತ್ತಿದೆ.
ಈ ಅತ್ಯಾಕರ್ಷಕ ಯದುರೇಶ್ವರ ಶಿವನ ದೇವಾಲಯ ಲೋಕಾರ್ಪಣೆಗೊಂಡು ಮೂರು ವರ್ಷಗಳಾಗಿವೆ. ಶಿವಭಕ್ತಾದಿಗಳಾದಿಯಾಗಿ ಮಕ್ಕಳು , ಕುಟುಂಬದವರು ಹೋಗಿ ಯದುರೇಶ್ವರ ಮಹದೇವ ಸ್ವಾಮಿ ದರ್ಶನ ಪಡೆಯಲು ಇಲ್ಲಿಗೆ ಆಗಮಿಸುತ್ತಿದ್ದು, ಪ್ರಮುಖ ಧಾರ್ಮಿಕ ಸ್ಥಳವಾಗಿ ರೂಪುಗೊಳ್ಳುತ್ತಿದೆ.
ರಾಜಸ್ಥಾನದ ಬನ್ನಿ ಪಹಾರಪುರದ ಪಿಂಕ್ ಕಲ್ಲಿನಲ್ಲಿ ಕೆತ್ತಿರುವ ಅದ್ಭುತ ಕಲಾ ಚಿತ್ರಗಳು ಪ್ರವಾಸಿಗರು ಹಾಗೂ ಭಕ್ತರ ಮನ ಸೂರೆಗೊಳ್ಳುತ್ತಿದೆ . ಮಂದಿರದ ಕಂಬಗಳು , ಮೇಲ್ಬಾವಣಿಯಲ್ಲಿ ಕುಸುರಿ ಕಲೆ ಅರಳಿದೆ. ರಾಜಸ್ಥಾನದಲ್ಲೇ ಮಂದಿರದ ಕಂಬಗಳನ್ನು ಕೆತ್ತಿಸಿಕೊಂಡು ಇಲ್ಲಿಗೆ ತರಲಾಗಿದೆ.
ಈ ದೇವಾಲಯದ ಮತ್ತೊಂದು ವಿಶೇಷವೆಂದರೆ, ನರ್ಮದಾ ನದಿ ತಟದಿಂದ ಶಿವಲಿಂಗವನ್ನು ತರಿಸಿ ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಕಾರ್ಖಾನೆ ಹಾಗೂ ವಸತಿ ಸಮುಚ್ಚಯದ ಮಧ್ಯೆ ನಿರ್ಮಾಣಗೊಂಡಿರುವ ದೇವಸ್ಥಾನವನ್ನು ಅಹ್ಮದಬಾದ್ ನಗರದ ಇಂಜಿನಿಯರ್ ಸಿ.ಬಿ. ಸೋಮಾಪುರ ವಿನ್ಯಾಸ ಮಾಡಿದ್ದಾರೆ.
ದೇವಸ್ಥಾನದ ಸುತ್ತ 6 ಎಕರೆ ಜಾಗದಲ್ಲಿ ಉದ್ಯಾನ11,700 ಚದುರ ಅಡಿಗಳಲ್ಲಿ ಮಂದಿರದ ಕಟ್ಟಡವನ್ನು ಕೇವಲ 15ತಿಂಗಳಲ್ಲಿ ಪೂರ್ಣಗೊಳಿಸಿದ್ದಾರೆ . ಅಲ್ಲದೆ ದೇವಸ್ಥಾನದ ಸುತ್ತ 6 ಎಕರೆ ಜಾಗದಲ್ಲಿ ವಿಶಾಲವಾದ ಉದ್ಯಾನ ನಿರ್ಮಿಸಲಾಗಿದ್ದು , ಹೂ ಗಿಡ, ಹಚ್ಚಹಸುರಿನ ಉದ್ಯಾನವನ ಕಣ್ಮನ ಸೆಳೆಯುತ್ತದೆ. ಯದುರೇಶ್ವರ ದೇವಾಲಯ ಶ್ರದ್ಧಾಭಕ್ತಿಯ ಕೇಂದ್ರವಾಗಿ ಕಂಗೊಳಿಸುತ್ತಿದೆ.
ಸಿಮೆಂಟ್, ಕಬ್ಬಿಣ ಬಳಸದೇ ದೇವಾಲಯ ನಿರ್ಮಾಣ
ಪುರಾತನ ದೇಗುಲಗಳಂತೆ ವಾಸ್ತುಶಾಸದ ಅನುಸಾರ, ಸಿಮೆಂಟ್ ಹಾಗೂ ಕಬ್ಬಿಣ ಬಳಸದೆ ದೇವಸ್ಥಾನವನ್ನು ನಿರ್ಮಿಸಿದ್ದು , ನೂರಾರು ವರ್ಷ ಬಾಳಿಕೆ ಬರುತ್ತದೆ . ದೇವಾಲಯ ನಿರ್ಮಾಣಕ್ಕೂ ಮುನ್ನ ಜೆ.ಕೆ. ಗ್ರೂಪ್‌ನ ಮಾಲೀಕ ಯದುಪತಿ ಸಿಂಘಾನಿಯಾ, ನಿರ್ದೇಶಕ ಮಾಧವಕೃಷ್ಣ ಸಿಂಘಾನಿಯಾ, ರಾಘವಪತ್ತ ಸಿಂಘಾನಿಯಾ ಮುತುವರ್ಜಿ ವಹಿಸಿ ಹಲವಾರು ಮಂದಿರಗಳನ್ನು ಪರಿವೀಕ್ಷಿಸಿ, ವಿಶಿಷ್ಟವಾದ ನೀಲಿ ನಕಾಶೆಯನ್ನು ಹಾಕಿಸಿ ಮಂದಿರ ನಿರ್ಮಾಣಕ್ಕೆ ನಿರ್ದೇಶನ ನೀಡಿದ್ದರು ಎಂದು ತಿಳಿದುಬಂದಿದೆ.