ಬಾಗಲಕೋಟೆ: ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಇಂದು ಮುಧೋಳ ನಗರದಲ್ಲಿ ರೈತ ಮುಖಂಡರ ಜತೆ ಸಭೆ ನಡೆಸಿದರು.
ಸಭೆಯಲ್ಲಿ ಬಾಗಲಕೋಟೆ ಎಸ್ಪಿ ಜಯಪ್ರಕಾಶ್ ಕೂಡ ಹಾಜರಿದ್ದರು.
ಈ ವೇಳೆ ‘ಕಬ್ಬು ಬೆಳೆಗಾರರು ಶಾಂತ ರೀತಿಯಲ್ಲಿ ಹೋರಾಟ ಮಾಡಬೇಕು, ಎಂತಹ ಸಂದರ್ಭದಲ್ಲೂ ರೈತರು ಕಾನೂನು ಕೈಗೆ ತೆಗೆದುಕೊಳ್ಳಬಾರದು’ ಎಂಬ ಕಿವಿಮಾತನ್ನು ಹೇಳಿದರು.
ಇದೇ ವೇಳೆ ಮಾತನಾಡಿದ ರೈತರು, ‘ಕಬ್ಬಿನ ಹಂಗಾಮು ಪ್ರಾರಂಭವಾಗಿ ತಿಂಗಳೇ ಗತಿಸಿ ಹೋಗಿದೆ, ಇದುವರೆಗೂ ಕಾರ್ಖಾನೆಗಳು ಬೆಲೆ ಘೋಷಣೆ ಮಾಡಿಲ್ಲ, ಅಧಿಕಾರಿಗಳು ಸರ್ಕಾರದ ಜತೆ ಮಾತನಾಡಿ ಕಾರ್ಖಾನೆ ಮಾಲೀಕರಿಗೆ ಸೂಕ್ತ ಬೆಲೆ ಘೋಷಣೆ ಮಾಡುವಂತೆ ಖಡಕ್ ಸೂಚನೆ ಕೊಡಬೇಕು’ ಎಂದು ಆಗ್ರಹಿಸಿದರು. ಸಭೆ ಬಳಿಕ ಕಬ್ಬು ಬೆಳೆಗಾರರು ಪುನಃ ಮುಧೋಳದ ಸಂಗೊಳ್ಳಿ ರಾಯಣ್ಣ ಸರ್ಕಲ್ನಲ್ಲಿ ನಡೆಯುತ್ತಿರುವ ಧರಣಿ ಹೋರಾಟದಲ್ಲಿ ಭಾಗಿಯಾದರು.
ನಿನ್ನೆ ರಬಕವಿ-ಬನಹಟ್ಟಿ ತಾಲ್ಲೂಕಿನ ಸಮೀರವಾಡಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಬೆಲೆ ಘೋಷಣೆ ಮಾಡಿದೆ. ರೈತರ ಹೋರಾಟದ ನಂತರ ಕಬ್ಬಿನ ಬೆಲೆಯನ್ನು ಪ್ರತಿ ಟನ್ಗೆ 2,900 ರೂಪಾಯಿ ಎಂದು ಹೇಳಿದೆ. ಆನಂತರ ರೈತರು ಹೋರಾಟ ಕೂಡ ನಿಲ್ಲಿಸಿದ್ದರು. ಆದರೆ ಕಾರ್ಖಾನೆಯಿಂದ ಇದುವರೆಗೂ ಅಧಿಕೃತ ಘೋಷಣೆ ಪತ್ರ ಸಿಕ್ಕಿಲ್ಲ. ಹೀಗಾಗಿ ಮರುದಿನ ಮಧ್ಯಾಹ್ನ 2 ಗಂಟೆಯ ಒಳಗೆ ಪ್ರತಿಭಟನಾ ಸ್ಥಳಕ್ಕೆ ಬಂದು 2,900 ರೂಪಾಯಿ ಘೋಷಣೆ ಪತ್ರ ತಂದು ತೋರಿಸಬೇಕು, ಇಲ್ಲದಿದ್ದರೆ ಮಾರನೆ ದಿನ ಮಧ್ಯಾಹ್ನ 2 ಗಂಟೆಯ ನಂತರ 10 ಸಾವಿರಕ್ಕೂ ಹೆಚ್ಚಿನ ರೈತರು ಸಮೀರವಾಡಿ ಸಕ್ಕರೆ ಕಾರ್ಖಾನೆಗೆ ಪುನಃ ಮುತ್ತಿಗೆ ಹಾಕಲಾಗುವುದು ಎಂದು ರೈತರು ಎಚ್ಚರಿಸಿದ್ದಾರೆ.
ಇದಷ್ಟೇ ಅಲ್ಲದೆ, ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬೆಲೆಯನ್ನು ಪ್ರತಿ ಟನ್ಗೆ 2,900 ರೂಪಾಯಿ ಎಂದು ಘೋಷಣೆ ಮಾಡಬೇಕು. ಇಲ್ಲದಿದ್ದರೆ ಮುಧೋಳದಲ್ಲಿ ನಡೆಯುತ್ತಿರುವ ಹೋರಾಟ ನಿಲ್ಲುವುದಿಲ್ಲಲ್ಲ ಎಂದು ರೈತರು ಖಡಕ್ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ. ಕಳೆದ ಹದಿನೈದು ದಿನಗಳಿಂದಲೂ ಈ ಹೋರಾಟ ನಡೆದಿದೆ. ಆದರೂ ಜನಪ್ರತಿನಿಧಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸಲು ಮುಂದಾಗಿಲ್ಲ. ಈ ಕಾರಣಕ್ಕೆ ಸರ್ಕಾರ ಮತ್ತು ಸಚಿವರು, ಶಾಸಕರ ವಿರುದ್ಧ ರೈತರ ಆಕ್ರೋಶ ತೀವ್ರಗೊಳ್ಳುತ್ತಿದೆ. ಹೀಗೆ ಮುಂದುವರೆದರೆ ಹೋರಾಟ ಇನ್ನೂ ತೀವ್ರ ಸ್ವರೂಪಕ್ಕೆ ತಿರುಗಲಿದೆ ಎಂದು ಹೇಳಲಾಗುತ್ತಿದೆ.