ಮುಂಬಯಿ: ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನಾ ಹಿರಿಯ ಮುಖಂಡ, ಉದ್ಧವ್ ಠಾಕ್ರೆ ಆಪ್ತ ಸಂಜಯ್ ರಾವತ್ ಗೆ ಮೂರು ತಿಂಗಳ ಬಳಿಕ ವಿಶೇಷ ನ್ಯಾಯಾಲಯ ಬುಧವಾರ (ನವೆಂಬರ್ 09) ಜಾಮೀನು ಮಂಜೂರು ಮಾಡಿದೆ.
ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಶಿವಸೇನಾ ಮುಖಂಡ, ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಕಳೆದ ಮೂರುವರೆ ತಿಂಗಳಿನಿಂದ ಜೈಲಿನಲ್ಲಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಅರ್ಜಿಯ ವಿಚಾರಣೆಯ ವಾದ, ಪ್ರತಿವಾದ ಆಲಿಸಿದ ನಂತರ ಕೋರ್ಟ್ ಅಕ್ಟೋಬರ್ 21ರಂದು ತೀರ್ಪನ್ನು ಕಾಯ್ದಿರಿಸಿತ್ತು.
ಮುಂಬಯಿಯ ವಸತಿ ಕಾಲೋನಿಯ ಪುನರ್ ನಿರ್ಮಾಣ ಕಾರ್ಯದಲ್ಲಿ ನಡೆದ ಅಕ್ರಮ ಮತ್ತು ಹಣಕಾಸು ವರ್ಗಾವಣೆ ಪ್ರಕರಣದ ಸಂಬಂಧ ಸಂಜಯ್ ರಾವತ್ ಅವರನ್ನು ಜಾರಿ ನಿರ್ದೇಶನಾಲಯ ಆಗಸ್ಟ್ 1ರಂದು ಬಂಧಿಸಿತ್ತು.
ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಎರಡು ಬಾರಿ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದ್ದರು ಕೂಡಾ ಸಂಜಯ್ ರಾವತ್ ಗೈರು ಹಾಜರಾಗಿದ್ದರು. ಇದೊಂದು ರಾಜಕೀಯ ದುರುದ್ದೇಶದ ಆರೋಪ ಎಂದು ರಾವತ್ ಆರೋಪಿಸಿದ್ದರು.