ಬೆಂಗಳೂರು: ನಾಡಪ್ರಭು ಕೆಂಪೇಗೌಡ ಅವರ ಕಂಚಿನ ಪುತ್ಥಳಿಯನ್ನು ಸಂಸತ್ತಿನ ಆವರಣದಲ್ಲಿ ಸ್ಥಾಪಿಸುವಂತೆ ಕೋರಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ಕೆಂಪೇಗೌಡರು 16ನೇ ಶತಮಾನದಲ್ಲಿ ಬೆಂಗಳೂರನ್ನು ಸ್ಥಾಪಿಸಿದರು.
ಅಂದು ಅವರು ಬಿತ್ತಿದ ಬೀಜ ಇಂದು ಜಾಗತಿಕ ಮನ್ನಣೆ ಪಡೆದಿರುವ ನಾವೆಲ್ಲರೂ ಹೆಮ್ಮೆ ಪಡುವಂತಹ ಕಾಸ್ಮೋಪಾಲಿಟಿನ್ ನಗರವಾಗಿದೆ.
ಕೆಂಪೇಗೌಡರು ರೂಪಿಸಿದ ಈ ಬೆಂಗಳೂರು ನೋಡಲು ತುಂಬಾ ಸುಂದರವಾಗಿದೆ. ಈ ನಗರ ತಂತ್ರಜ್ಞಾನದ ಲಾಂಛನವಾಗಿದೆ. ಇಲ್ಲಿರುವಷ್ಟು ಸಾರ್ವಜನಿಕ ಮತ್ತು ಖಾಸಗಿ ತಂತ್ರಜ್ಞಾನದ ಸಂಸ್ಥೆಗಳು ದೇಶದ ಬೇರೆ ಯಾವ ನಗರದಲ್ಲೂ ಇಲ್ಲ ಎಂದು ದೇವೇಗೌಡರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
ಬೆಂಗಳೂರು ನಿರ್ಮಾತೃ ಕೆಂಪೇಗೌಡ ಕೇಂದ್ರ ಸಮಿತಿಯು ಪ್ರಧಾನಿಯವರಿಗೆ ಸಲ್ಲಿಸಿರುವ ಮನವಿಯನ್ನು ತಮ್ಮ ಪತ್ರದಲ್ಲಿ ಉಲ್ಲೇಖಿಸಿರುವ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಸಂಸತ್ತಿನ ಆವರಣದಲ್ಲಿ ಕೆಂಪೇಗೌಡರ ಕಂಚಿನ ಪುತ್ಥಳಿ ಸ್ಥಾಪಿಸಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿಕೊಂಡಿದ್ದಾರೆ.