ಬೆಳಗಾವಿ (ಚನ್ನಮ್ಮನ ಕಿತ್ತೂರು): ಮುಖ್ಯಮಂತ್ರಿ ಸ್ಥಾನ ಹೋದರೂ ಅಡ್ಡಿಯಿಲ್ಲ. ಕಿತ್ತೂರು ಚನ್ನಮ್ಮನ ಪವಿತ್ರ ಭೂಮಿಗೆ ಸತತ ಎರಡು ಸಲ ಬಂದು ಆಶೀರ್ವಾದ ಪಡೆದುಕೊಂಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ರಾಜ್ಯಮಟ್ಟದ ಕಿತ್ತೂರು ಉತ್ಸವಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಕಿತ್ತೂರು ಉತ್ಸವಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನ ಹೋಗುತ್ತದೆ ಎಂಬ ಮೂಢನಂಬಿಕೆ ಇದೆ.
ಸ್ಥಾನ ಕಳೆದುಕೊಳ್ಳುವ ಭಯ ದಿಂದ ಬಹಳಷ್ಟು ಮುಖ್ಯಮಂತ್ರಿಗಳು ಕಿತ್ತೂರಿಗೆ ಬಂದಿಲ್ಲ. ಇದಕ್ಕೆ ಸಡ್ಡು ಹೊಡೆದು ಮುಖ್ಯಮಂತ್ರಿಯಾಗಿ ಎರಡು ಬಾರಿ ಉತ್ಸವಕ್ಕೆ ಬಂದಿದ್ದೇನೆ.
ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದಾಗ ಕಿತ್ತೂರು ಉತ್ಸವಕ್ಕೆ ಬಂದಿದ್ದು, ಬಳಿಕ ಸ್ಥಾನ ಕಳೆದುಕೊಂಡಿದ್ದರು. ಇಂತಹ ಪವಿತ್ರ ಸ್ಥಾನಕ್ಕೆ ಬಂದು ಪಾಲ್ಗೊಳ್ಳುವುದರಿಂದ ಪುಣ್ಯ ಬರುತ್ತದೆ ಎಂಬುದು ನನ್ನ ನಂಬಿಕೆ ಎಂದರು.
ಚನ್ನಮ್ಮನ ಕೋಟೆ ಪಕ್ಕದಲ್ಲೇ ಅರಮನೆ ನಿರ್ಮಾಣ
ಕಿತ್ತೂರಿನ ರೈತರ ಮನವೊಲಿಸಿ ಜಮೀನು ಸ್ವಾ ಧೀನಪಡಿಸಿಕೊಂಡು ಈಗಿರುವ ಚನ್ನಮ್ಮನ ಕೋಟೆಯ ಪಕ್ಕದಲ್ಲೇ ಅರಮನೆಯ ಪ್ರತಿರೂಪ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಚನ್ನಮ್ಮನ ಅರಮನೆ ನಿರ್ಮಾಣಕ್ಕೆ 115 ಕೋಟಿ ರೂ. ಅನು ದಾನಕ್ಕೆ ಅನುಮೋದನೆ ನೀಡಲಾಗಿದೆ.
ಶಿಥಿಲಾವಸ್ಥೆಯಲ್ಲಿರುವ ಕೋಟೆಯ ಜೀರ್ಣೋದ್ಧಾರಕ್ಕೆ 27 ಕೋಟಿ ರೂ. ಅನುದಾನವನ್ನು ಕಿತ್ತೂರು ಅಭಿವೃದ್ಧಿ ಪ್ರಾ ಧಿಕಾರದಲ್ಲಿ ತೆಗೆದಿರಿಸಲಾಗಿದೆ. ಏತ ನೀರಾವರಿ ಯೋಜನೆಗೆ 580 ಕೋಟಿ ರೂ. ಅನುದಾನ ನೀಡಲಾಗಿದೆ. ಅದೇ ರೀತಿ ಜಲಜೀವನ ಮಿಷನ್ ಯೋಜನೆಯಡಿ ಕಿತ್ತೂರು, ಖಾನಾಪುರ ಹಾಗೂ ಬೈಲಹೊಂಗಲ ಕ್ಷೇತ್ರಗಳಿಗೆ 960 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದರು.