ಪ್ರತಿ ಟನ್ ಕಬ್ಬಿಗೆ 3500 ರೂಪಾಯಿ ನೀಡುವಂತೆ ಆಗ್ರಹಿಸಿ ಬೆಳಗಾವಿಯ ಸುವರ್ಣಸೌಧ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ನಿಪ್ಪಾಣಿ ಹಾಗೂ ಗೋಕಾಕ್ ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹೌದು ಕಬ್ಬಿನ ಬೆಲೆ ನಿಗದಿ ಪಡಿಸುವಂತೆ ಸಿಎಂ ಬೊಮ್ಮಾಯಿ ವಿರುದ್ಧ ಬೆಳಗಾವಿ ಜಿಲ್ಲೆಯ ರೈತರು ಸಮರ ಸಾರಿದ್ದಾರೆ. ಬೆಳಗಾವಿ ಡಿಸಿ ಕಚೇರಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಅಹೋರಾತ್ರಿ ಧರಣಿ ಆರಂಭವಾಗಿದೆ. ಮತ್ತೊಂದು ಕಡೆ ನಿಪ್ಪಾಣಿ ನಿಪ್ಪಾಣಿ ಹಾಗೂ ಗೋಕಾಕ್‍ನಿಂದ ಆಗಮಿಸಿದ್ದ 50ಕ್ಕೂ ಹೆಚ್ಚು ರೈತ ಹೋರಾಟಗಾರರು ಸುವರ್ಣಸೌಧ ಮುಂಭಾಗದಲ್ಲಿ ಧರಣಿ ನಡೆಸಿದರು.
ಇದೇ ವೇಳೆ ರಾಷ್ಟ್ರೀಯ ಹೆದ್ದಾರಿಯನ್ನು ತಡೆಯಲು ಮುಂದಾದರು. ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ, ಗ್ರಾಮೀಣ ಎಸಿಪಿ ಗಿರೀಶ್ ದೌಡಾಯಿಸಿ ರೈತರನ್ನು ಮನವಲಿಸಲು ಪ್ರಯತ್ನಿಸಿದರು. ಇದಕ್ಕೆ ಒಪ್ಪದ ರೈತರು ಹೆದ್ದಾರಿ ಬಂದ್ ಮಾಡಲು ಮುಂದಾದರು. ಈ ವೇಳೆ ಪೊಲೀಸರು ಮತ್ತು ಹೋರಾಟಗಾರರ ಮಧ್ಯ ವಾಗ್ವಾದ ನಡೆಯಿತು.
ಈ ಸಂಬಂಧ ಮಾತನಾಡಿದ ರೈತ ಮುಖಂಡ ಶ್ರೀಶೈಲ್ ಅಂಗಡಿ ಕಬ್ಬಿಗೆ ಯೋಗ್ಯ ಬೆಲೆ ನಿಗದಿ ಮಾಡಬೇಕು. ಎಫ್‍ಆರ್‍ಪಿ ಪ್ರಕಾರ ಹೋದರೆ 2600 ರೂಪಾಯಿ ಸಿಗುತ್ತದೆ. ಹೀಗಾಗಿ 3500 ರೂಪಾಯಿ ನೀಡಬೇಕು ಎಂದು ಆಗ್ರಹಿಸುತ್ತಿದ್ದೇವೆ. ಅದೇ ರೀತಿ ಸರ್ಕಾರ ಕೂಡ 2 ಸಾವಿರ ರೂಪಾಯಿ ನೀಡಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ. ಚನ್ನಮ್ಮಾಜಿ ವಿಜಯೋತ್ಸವ ದಿನವೇ ನಾವು ಹೋರಾಟ ಮಾಡುವ ಪರಿಸ್ಥಿತಿ ಉದ್ಭವವಾಗಿದೆ. ಶಂಕರ್ ಪಾಟೀಲ್ ಮುನೇನಕೊಪ್ಪ ಭ್ರಷ್ಟ ಸಕ್ಕರೆ ಮಂತ್ರಿ. ಕಾರ್ಖಾನೆ ಮಾಲೀಕರ ಪರವಾಗಿದ್ದು. ರೈತರ ಹಿತ ಕಾಪಾಡುವ ಮಂತ್ರಿ ಅಲ್ಲ.
ನಂತರ ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ರೈತ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತಮ್ಮ ವಾಹನದಲ್ಲಿ ಕರೆದೊಯ್ದರು.