ಪೃಥ್ವಿ, ಆಕಾಶದಲ್ಲಿ ಸೂರ್ಯಗ್ರಹಣಗಳು ಸಹಜ ಪ್ರಕ್ರಿಯೆಗಳು ಆದರೆ ಬಹಳಷ್ಟು ಜ್ಯೋತಿಷಿಗಳು ಇದನ್ನು ಮೂಢನಂಬಿಕೆಗೆ ಪರಿವರ್ತನೆ ಮಾಡುವಲ್ಲಿ ಪ್ರಯತ್ನಿಸುತ್ತಿದ್ದಾರೆ. ದೇವರು ಮತ್ತು ಧರ್ಮದ ಮುಖಾಂತರ ಜನರನ್ನು ಹೆದರಿಸುತ್ತಿದ್ದಾರೆ. ಹೀಗಾಗಿ ಇದರಿಂದ ಯಾರೂ ಹೆದರುವ ಅವಶ್ಯಕತೆ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಕರೆ ನೀಡಿದರು.
ಗೋಕಾಕ್‍ನ ತಮ್ಮ ನಿವಾಸದಲ್ಲಿ ಮಾತನಾಡಿದ ಸತೀಶ ಜಾರಕಿಹೊಳಿ ಅವರು ಪ್ರತಿವರ್ಷದಂತೆ ಈ ವರ್ಷವೂ ದೀಪಾವಳಿ ಹಬ್ಬವನ್ನು ರಾಜ್ಯ ಮತ್ತು ರಾಷ್ಟ್ರದ ಜನ ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ದೀಪಾವಳಿಯಿಂದ ಎಲ್ಲರೂ ಶಾಂತಿ, ಸಮೃದ್ದಿಯಿಂದ ಬದುಕಲಿ, ಬೆಳೆಯಲಿ. ತಮ್ಮ ಸಾಕಷ್ಟು ಸಮಸ್ಯೆಗಳು ಪರಿಹಾರ ಆಗಲಿ ಎಂದು ಶುಭಾಶಯ ಕೋರುತ್ತೇನೆ ಎಂದರು.
ಇದೇ ವೇಳೆ ಸೂರ್ಯಗ್ರಹಣದ ಬಗ್ಗೆ ಮಾತನಾಡಿದ ಸತೀಶ ಜಾರಕಿಹೊಳಿ ಬೇರೆ ದೇಶದಲ್ಲಿ ಗ್ರಹಣ, ಅಮವಾಸ್ಯೆ, ಹುಣ್ಣಿಮೆ ಎಂಬ ಬಗ್ಗೆ ಗೊತ್ತಿಲ್ಲ. ಇದನ್ನು ಅತೀಯಾಗಿ ನಮ್ಮ ದೇಶದಲ್ಲಿ ಆಚರಣೆ ಮಾಡುತ್ತೇವೆ. ಜನರನ್ನು ಹೆದರಿಸಿ ಅವರು ಬದುಕಲು ಇದೊಂದು ಕಲೆಯಾಗಿದೆ. ಇದರಿಂದ ಜನರು ಹೊರಗೆ ಬರಬೇಕು. ಬುದ್ಧ, ಬಸವ, ಅಂಬೇಡ್ಕರ್, ಶಾಹು ಮಹಾರಾಜರು, ಫುಲೆ ದಂಪತಿಗಳು, ಪೆರಿಯಾರ್ ಸೇರಿದಂತೆ ಸಾವಿರಾರು ಮಹನೀಯರು ಈ ಮೂಢ ನಂಬಿಕೆಗಳನ್ನು ವಿರೋಧಿಸಿದ್ದಾರೆ. ಹೀಗಾಗಿ ಇದರಿಂದ ಏನೂ ಆಗುವುದಿಲ್ಲ. ಅದೊಂದು ದಿನ ಸೂರ್ಯ ಸುತ್ತುತ್ತಾನೆ, ಹೋಗುತ್ತಾನೆ. ಎಂದಿನ ದಿನದಂತೆ ಉಳಿದ ದಿನಗಳು ಇರುತ್ತವೆ ಎಂದರು.
: ಭಾರತ್ ಜೋಡೋ ಯಾತ್ರೆ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಹಿಂದೆ ಗಾಂಧೀಜಿ ಅವರು ಪಾದಯಾತ್ರೆ ಮಾಡಿದ್ದರು. 30 ವರ್ಷಗಳ ಹಿಂದೆ ಮಾಜಿ ಪ್ರಧಾನಿ ಚಂದ್ರಶೇಖರ್ ಅವರು ಕೂಡ ಮಾಡಿದ್ದರು. ಜನ ಅದನ್ನು ಮರೆತು ಹೋಗಿದ್ದರು. ಈಗ ರಾಹುಲ್ ಗಾಂಧಿ ಅವರು ಸುಮಾರು 3500 ಕಿ.ಮೀ. ದೀರ್ಘ ಪಾದಯಾತ್ರೆ ಕೈಗೊಂಡಿದ್ದಾರೆ. ಈ ವೇಳೆ ಬಹಳಷ್ಟು ಸಮಸ್ಯೆಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಲಾಗುತ್ತದೆ. ಕಳೆದ 8 ವರ್ಷದ ಬಿಜೆಪಿ ಆಡಳಿತದಲ್ಲಿ ದೇಶದಲ್ಲಿ ದ್ವೇಷದ ವಾತಾವರಣ ನಿರ್ಮಾಣವಾಗಿದೆ. ಅದನ್ನು ಹೊಗಲಾಡಿಸಲು ಭಾರತ್ ಜೋಡೋ ಯಾತ್ರೆ ಮೂಲಕ ರಾಹುಲ್ ಗಾಂಧಿ ಪ್ರಯತ್ನಿಸುತ್ತಿದ್ದಾರೆ ಎಂದರು.
ಚಾಮರಾಜ್‍ನಗರದ ಗುಂಡ್ಲುಪೇಟೆಯಲ್ಲಿ ಮನೆ ಹಕ್ಕು ಪತ್ರ ವಿತರಣೆ ವೇಳೆ ಮಹಿಳೆ ಓರ್ವರ ಕಪಾಳಕ್ಕೆ ಸಚಿವ ವ್ಹಿ.ಸೋಮಣ್ಣ ಹೊಡೆದಿದ್ದಾರೆ. ಇದು ಬಿಜೆಪಿಯಲ್ಲಿ ಹೊಸದೂ ಏನೂ ಅಲ್ಲ. ಈ ರೀತಿ ಘಟನೆಗಳು ಅವರಲ್ಲಿ ನಡೆಯುತ್ತಲೇ ಇರುತ್ತವೆ. ಜನ ಬುದ್ಧಿ ಕಲಿಸುವ ದಿನಗಳು ಬರುತ್ತವೆ. ಅಲ್ಲಿಯವರೆಗೂ ನಾವು ಕಾಯಬೇಕಷ್ಟೇ ಎಂದರು.