ಬೆಂಗಳೂರು: ಅಪ್ಪು ಅವರಂತೆ ಈ ಸಿನೆಮಾ ಮುಂದಿನ ಪೀಳಿಗೆಗೆ ಒಂದು ದಂತಕಥೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಅವರು ಪುನೀತ್ ರಾಜ್ ಕುಮಾರ್ ಅವರ ‘ ಗಂಧದ ಗುಡಿ ‘ ಚಿತ್ರ ಬಿಡುಗಡೆಯ ಪೂರ್ವಭಾವಿಯಾಗಿ ಆಯೋಜಿಸಲಾಗಿದ್ದ ಪುನೀತ ಪರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕನ್ನಡ ನಾಡು ಮತ್ತು ಗಂಧದ ಗುಡಿಯನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಅಂತಹ ವಿಚಾರ ದೊಂದಿಗೆ, ಕಾಡು, ನಿಸರ್ಗ, ಪ್ರಾಣಿಗಳನ್ನು ಇಟ್ಟುಕೊಂಡು ಅಪ್ಪು ಮಾಡಿದ ಈ ಸಿನೆಮಾ ಅತ್ಯಂತ ಪ್ರಸ್ತುತವಾಗಿದೆ. ನಿಸರ್ಗವನ್ನು ಮುಂದಿನ ಜನಾಂಗಕ್ಕೆ ಬಿಟ್ಟು ಹೋಗುವ ಅವಶ್ಯಕತೆ ಇದೆ. ಇಲ್ಲವಾದರೆ ಮುಂದಿನ ಜನಾಂಗದ ಭವಿಷ್ಯದಲ್ಲಿ ಕಳ್ಳತನ ಮಾಡಿದಂತೆ ಎಂದು ಅಭಿಪ್ರಾಯ ಪಟ್ಟರು.
ಮನಸ್ಸುಗಳು ಭಾವನಾತ್ಮಕವಾದ ಶಬ್ದಗಳ ತೂಕ ಕಡಿಮೆ. ಅಪ್ಪು ನಮ್ಮ ಜೊತೆಗೆ ಇದ್ದಾರೆ. ಪ್ರತಿ ಕ್ಷಣ ನಮ್ಮನ್ನು ನೋಡ್ತಾ ಇರ್ತಾರೆ. ಇರುವಾಗ ಹೊಗಳುವುದು ಸಹಜ. ಇಲ್ಲದೇ ಇರುವಾಗ ನೆನಪು ಮಾಡಿಕೊಳ್ಳುವುದು ದೈವದ ಆಶೀರ್ವಾದ ಇದ್ದರೆ ಮಾತ್ರ ಸಾಧ್ಯ. ಅಂತಹ ಆಶೀರ್ವಾದ ಅಪ್ಪು ಮೇಲಿತ್ತು ಎಂದು ಮುಖ್ಯಮಂತ್ರಿ ಬೊಮ್ಮಾಯಿ ನುಡಿದರು.
ರಾಜ್ ಕುಮಾರ್ ಅವರ ಎಲ್ಲ ಗುಣಧರ್ಮಗಳನ್ನು ನೂರಕ್ಕೆ ನೂರರಷ್ಟು ಹೊಂದಿದವರು ಪುನೀತ್ ರಾಜಕುಮಾರ್. ಎಷ್ಟೇ ದೊಡ್ಡ ಸ್ಟಾರ್ ಆದರೂ ನಯ, ವಿನಯವನ್ನು ಒಂದು ಕ್ಷಣವೂ ಮರೆತಿರಲಿಲ್ಲ. ಅಪ್ಪು ಅತ್ಯಂತ ಸಣ್ಣ ವಯಸ್ಸಿನಲ್ಲೇ ಬಾಲನಟನಾಗಿ ದೊಡ್ಡ ಹೆಸರು ಮಾಡಿದಾಗ ಸಂತೋಷವಾಗಿತ್ತು. ಆದರೆ ಸಣ್ಣ ವಯಸ್ಸಿನಲ್ಲೇ ನಮ್ಮನ್ನು ಬಿಟ್ಟು ಹೋದಾಗ ದುಃಖ ತಡೆಯಲು ಆಗಲಿಲ್ಲ.