ಇಂದು ( ಅಕ್ಟೋಬರ್ 21 ) ತಿಂಗಳಿನ ಮೂರನೇ ಶುಕ್ರವಾರ. ಕಳೆದೆರಡು ಶುಕ್ರವಾರಗಳು ಬಿಡುಗಡೆಗೊಂಡ ಯಾವುದೇ ಚಿತ್ರಗಳು ಕೂಡ ಸೆಪ್ಟೆಂಬರ್ ತಿಂಗಳ ಅಂತಿಮ ದಿನದಂದು ಬಿಡುಗಡೆಗೊಂಡ ಕಾಂತಾರ ಚಿತ್ರವನ್ನು ಮಣಿಸುವಲ್ಲಿ ಯಶಸ್ವಿಯಾಗಿಲ್ಲ.
ತೆಲುಗಿನಲ್ಲಿ ಚಿರಂಜೀವಿ ಹಾಗೂ ನಾಗಾರ್ಜುನ ರೀತಿಯ ದೊಡ್ಡ ದೊಡ್ಡ ನಟರ ಚಿತ್ರಗಳನ್ನೂ ಸಹ ಮಣಿಸಿದ ಕಾಂತಾರ ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಗುಡ್ ಬೈ ಚಿತ್ರಕ್ಕೂ ಸಹ ಮಣ್ಣು ಮುಕ್ಕಿಸಿತ್ತು.
ಹೀಗೆ ದೇಶಾದ್ಯಂತ ಅಬ್ಬರಿಸಿರುವ ಕಾಂತಾರ ಚಿತ್ರ ಇಂದು ನಾಲ್ಕನೇ ವಾರಕ್ಕೆ ಲಗ್ಗೆ ಇಟ್ಟಿದ್ದು, ಈ ಶುಕ್ರವಾರ ವಿವಿಧ ಚಿತ್ರರಂಗಗಳ ಒಟ್ಟು ಹತ್ತಾರು ಸಿನಿಮಾಗಳು ತೆರೆಕಂಡಿವೆ.
ಈ ಪೈಕಿ ತಮಿಳುನಾಡಿನಲ್ಲಿ ಕಾರ್ತಿ ಮತ್ತು ಶಿವಕಾರ್ತಿಕೇಯನ್ ಅಭಿನಯದ ಚಿತ್ರಗಳು ಬಿಡುಗಡೆಗೊಂಡಿರುವ ಕಾರಣ ಕಾಂತಾರ ಚಿತ್ರದ ಪ್ರದರ್ಶನಗಳ ಸಂಖ್ಯೆ ತುಸು ಕುಸಿದಿದೆ ಹಾಗೂ ತೆಲುಗಿನ ಕೆಲ ಚಿತ್ರಗಳು ಬಿಡುಗಡೆಯಾದರೂ ಸಹ ಕಾಂತಾರ ಚಿತ್ರದ ಪ್ರದರ್ಶನಗಳ ಸಂಖ್ಯೆಯಲ್ಲಿ ಅಷ್ಟೇನೂ ವ್ಯತ್ಯಾಸವಾಗಿಲ್ಲ. ಇನ್ನು ತನ್ನ ಸ್ವಂತ ನೆಲವಾದ ಕರ್ನಾಟಕದಲ್ಲಿ ಕಾಂತಾರ ನಾಲ್ಕನೇ ವಾರವೂ ಗಟ್ಟಿಯಾಗಿ ನೆಲೆಯೂರಿದೆ. ಧನಂಜಯ್ ಅಭಿನಯದ ಹೆಡ್ ಬುಷ್ ಜತೆಗೆ ಹಲವಾರು ಚಿತ್ರಗಳು ಬೆಂಗಳೂರು ನಗರದಲ್ಲಿ ಬಿಡುಗಡೆಗೊಂಡಿದ್ದರೂ ಸಹ ಕಾಂತಾರ ಎಲ್ಲಾ ಚಿತ್ರಗಳನ್ನು ಹಿಂದಿಕ್ಕಿ ತನ್ನ 22ನೇ ದಿನವೂ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಳ್ಳುವುದರ ಮೂಲಕ ನೂತನವಾಗಿ ಬಿಡುಗಡೆಗೊಂಡ ಚಿತ್ರಗಳಿಗೆ ಟಕ್ಕರ್ ನೀಡಿದೆ.