ಚಿತ್ರದುರ್ಗ : ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೂರ್ತಿ ಮುರುಘಾ ಶರಣರನ್ನು ಬಂಧಿಸಿದ ನಂತರ ದಾವಣಗೆರೆಯ ವಿರಕ್ತ ಮಠದ ಶ್ರೀ ಬಸವಪ್ರಭು ಅವರನ್ನು ಮುರುಘಾ ಮಠದ ಉಸ್ತುವಾರಿ ಪೀಠಾಧಿಪತಿಯಾಗಿ ನೇಮಿಸಲಾಗಿದೆ.
ಇದರ ನಡುವೆ ಮಾಜಿ ಸಚಿವೆ ರಾಣಿ ಸತೀಶ ಆಡಿಯೋ ಸಂಭಾಷಣೆಯೊಂದು ವೈರಲ್ ಆಗಿದೆ. ಮಠದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಶಾಮನೂರು ಶಿವಶಂಕರಪ್ಪನವರ ಹಣವಿದೆ ಎನ್ನುವ ವಿಚಾರ ಈ ಆಡಿಯೋದಲ್ಲಿದೆ. ಚಿತ್ರದುರ್ಗ ವೀರಶೈವ ಮಹಾಸಭಾದ ಜಿಲ್ಲಾದ್ಯಕ್ಷ ಮಹಡಿ ಶಿವಮೂರ್ತಿ ಅವರ ಜೊತೆ ರಾಣಿ ಸತೀಶ ಮಾತನಾಡಿದ್ದು, ಆಡಿಯೋ ಸಂಭಾಷಣೆ ವೈರಲ್ ಆಗಿದೆ.
ಶಾಮನೂರು ಹಾಗೂ ಯಡಿಯೂರಪ್ಪನವರ ಹಣ ಮುರುಘಾಶ್ರೀ ಬಳಿಯಿದೆ ಎಂದು ಜನ ಮಾತಾಡ್ತಾರೆ. ಇನ್ನೇನು ಹುಳುಕಿದೆಯೋ ಮುಚ್ಚಿ ಹಾಕಲು ಬಸವಪ್ರಭು ಶ್ರೀಗಳನ್ನ ನೇಮಕ ಮಾಡಿದ್ದಾರೆ. ಸಿಎಂ ಆದಷ್ಟು ಬೇಗ ಮಠಕ್ಕೆ ಆಡಳಿತಾಧಿಕಾರಿ ನೇಮಿಸಬೇಕು ಎಂದು ಆಡಿಯೋದಲ್ಲಿ ಒತ್ತಾಯಿಸಿದ್ದಾರೆ. ರಾಣಿ ಸತೀಶ ಆಡಿಯೋ ಸಂಭಾಷಣೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಡಿಯೋದ ಸತ್ಯಾನುಸತ್ಯತೆ ಬಗ್ಗೆ ತನಿಖೆಯಿಂದಲೇ ತಿಳಿದು ಬರಬೇಕಾಗಿದೆ.